ಮನೋರಂಜನೆ

ಸಂಭಾವನೆಗೆ ಉತ್ತರ ಐಂದ್ರಿತಾ ನಿರುತ್ತರ

Pinterest LinkedIn Tumblr

remunaration-AINDRITHA-e1463216394975ನಾಯಕರ ಅಬ್ಬರದ ನಡುವೆಯೂ ತನ್ನದೇ ಆದ ಇಮೇಜ್ ಸೃಷ್ಟಿಸಿಕೊಂಡು ಹೀರೋಗೆ ಸರಿಸಮನಾಗಿ ಬೆಳೆದು ನಿಂತ ಹಲವು ನಟಿಯರು ಕನ್ನಡದಲ್ಲೇ ಇದ್ದಾರೆ. ಬಿ ಸರೋಜಾದೇವಿ, ಮಾಲಾಶ್ರಿ, ರಮ್ಯರಂತಹಾ ನಾಯಕಿಯರು ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಕನಸಿನ ರಾಣಿಯರಾಗಿ ಆಳಿದ್ದಾರೆ ಅಂತ ಹೇಳುತ್ತೇವೆ. ಅವರಿಗೂ ಇದ್ದ ಸಂಭಾವನೆ ನಾಯಕರಿಗೆ ಹೋಲಿಸಿದರೆ ನಾಲ್ಕಾಣೆ ಕಾಸೇ ಎನ್ನುವುದು ಸಿನಿಪಂಡಿತರ ಉತ್ತರ. ಹಾಗಾದರೆ ಅವರು ಆಳಿದ್ದು ಅರಮನೆಯನ್ನಲ್ಲ ಅಂತಃಪುರವನ್ನು ಮಾತ್ರ.

ಇತ್ತೀಚೆಗೆ ಐಂದ್ರಿತಾ ರೆ ಮತ್ತೊಮ್ಮೆ ಗಾಂಧಿನಗರದಲ್ಲಿ ನಾಯಕಿಯರಿಗೆ ಕಡಿಮೆ ಸಂಭಾವನೆ ನೀಡಲಾಗುತ್ತಿದೆ ನಾಯಕನಿಗೆ ಸಿಗುವ ಸೌಲಭ್ಯಗಳು ನಾಯಕಿಗೆ ಸಿಗುತ್ತಿಲ್ಲ ಎನ್ನುವ ಮಾತನ್ನಾಡಿದ್ದಾರೆ. ಸಿನಿಮಾದ ವಿಚಾರದಲ್ಲಿ ಯಾವುದೇ ಚಿತ್ರರಂಗದಲ್ಲೂ ನಾಯಕನದ್ದೇ ಸಿಂಹಪಾಲು. ಕಾಡಿಗೆ ಹೇಗೆ ಸಿಂಹ ರಾಜನೋ ಸಿಂಹಿಣಿ ಅಲ್ಲವೋ ಹಾಗೇ ಚಂದನವನಕ್ಕೂ ನಾಯಕನೇ ರಾಜ. ಸಿನಿಮಾದಲ್ಲಿ ಪ್ರೇಕ್ಷಕರು ಬರುವುದು ಕೂಡ ಹೀರೋನ ಹೆಸರಿಗೇನೇ? ಈ ವಾರ ಬಂತಲ್ಲ ಆ ಸಿನಿಮಾ ಚೆನ್ನಾಗಿದೆಯಂತೆ ಗೊತ್ತಾಯ್ತಾ? ಅಂತ ಯಾರಾದರೂ ಹೇಳಿದರೆ ಅವನಿಗೆದುರಾಗುವ ಮೊದಲ ಪ್ರಶ್ನೆ ಹೌದಾ? ಹೀರೋ ಯಾರು? ಅಂತ.

ಸಿನಿಮಾ ಅಂದಾಗ ಕಥೆ, ನಿರ್ದೇಶಕ, ನಿರ್ಮಾಪಕ, ನಾಯಕಿ ಇದ್ಯಾವುದೂ ಪ್ರೇಕ್ಷಕನ ಕಣ್ಣ ಮುಂದೆ ಬರೋದಿಲ್ಲ. ಸಿನಿಮಾ ಅಂದ್ರೆ ಹೀರೋ ಅನ್ನುವಷ್ಟರ ಮಟ್ಟಿಗೆ ನಾಯಕನ ಪ್ರಭಾವ ಹಾಸು ಹೊಕ್ಕಾಗಿದೆ ಭಾರತೀಯ ಚಿತ್ರರಂಗದಲ್ಲಿ. ಇತ್ತೀಚಗಷ್ಟೇ ಹತ್ತಾರು ಮಾಧ್ಯಮಗಳ ಭರಾಟೆಗೆ ಸಿಕ್ಕಿ ಕೆಲವು ಪ್ರತಿಭಾವಂತ ನಿರ್ದೇಶಕರು ಜನರ ಮುಂದೆ ಬಂದಿರುವುದರಿಂದ ಯೋಗರಾಜ್ ಭಟ್ ಸಿನಿಮಾ, ಜೋಗಿ ಪ್ರೇಮ್ ಸಿನಿಮಾ, ಆರ್ ಚಂದ್ರು ಸಿನಿಮಾ ಅಂತಾನೂ ಪ್ರೇಕ್ಷಕರು ಗುರುತಿಸೋಕೆ ಶುರುಮಾಡಿದ್ದಾರೆ.

ಇನ್ನು ನಾಯಕಿಯರ ಮೂಲಕ ಸಿನಿಮಾವನ್ನು ಗುರುತಿಸುವುದಂತೂ ದೂರದ ಮಾತು. ಹಾಗೆ ನೋಡಿದರೆ ನಾಯಕಿಯರ ಮೂಲಕ ಪ್ರೇಕ್ಷಕ ಸಿನಿಮಾವನ್ನು ನೋಡುವುದಿಲ್ಲ. ಸಿನಿಮಾದಲ್ಲಿ ನಾಯಕನೇ ತಾನಾಗಿ, ನಾಯಕನ ಮೂಲಕ ತನ್ನನ್ನು ತಾನು ಕಲ್ಪಿಸಿಕೊಳ್ಳುವ ಪ್ರೇಕ್ಷಕನಿಗೆ ನಾಯಕಿ ಅಲ್ಲಲ್ಲಿ ಹಾಡಿನಲ್ಲಿ ನಾಯಕನಿಗೆ ಸಾಥ್ ಕೊಡುವ ಸುಂದರಿ ಅಷ್ಟೇ. ಇನ್ನು ಸ್ಟಾರ್ ನಟರ ಸಿನಿಮಾಗಳಲ್ಲಂತೂ ನಾಯಕನ ವೈಭವೀಕರಣದ ಮುಂದೆ ನಾಯಕಿ ತೆರೆಯನ್ನು ಸಂಪೂರ್ಣವಾಗಿ ತಾನೊಬ್ಬಳೇ ತುಂಬೋಕೆ ನಿರ್ದೇಶಕ ನಿರ್ಮಾಪಕರೇ ಬಿಡುವುದಿಲ್ಲ. ಜೊತೆಗೆ ಪಾತ್ರಗಳ ವಿಚಾರದಲ್ಲೂ ನಾಯಕಿಗಿರುವ ಪ್ರಾಮುಖ್ಯತೆ ಕಡಿಮೆಯೇ.

ಮಾಸ್ ಸಿನಿಮಾಗಳಲ್ಲಿ ನಾಯಕನ ಅರ್ಥವಿಲ್ಲದ ಬಿಲ್ಡಪ್‌ಗಳಿಗಾಗಿ ನಾಯಕಿಯ ಸುಂದರ ನಟನೆಯ ದೃಶ್ಯಗಳೂ ಕೂಡ ಕತ್ತರಿ ಪ್ರಯೋಗಕ್ಕೆ ಒಳಗಾಗುತ್ತವೆ. ಹಾಗಂತ ಇದು ಯಾರೋ ನಾಯಕನನ್ನು ಹೀಗೇ ತೋರಿಸಬೇಕು ಅಂತ ಬರೆದಿಟ್ಟು ಹೋದ ಸಂವಿಧಾನವಲ್ಲ. ಒಂದು ಸಿನಿಮಾಗಾಗಿ ಒಂದಿಡೀ ವರ್ಷ ಕಷ್ಟಪಡೋದು ನಾಯಕ ಮಾತ್ರ. ನಾಯಕಿಯ ದೃಶ್ಯಗಳ ಶೂಟಿಂಗ್ ಇದ್ದಾಗ ನಾಯಕಿ ಅಭಿನಯಿಸುತ್ತಾರಷ್ಟೆ. ಆದರೆ ಹೀರೋ ಹೆಚ್ಚೂ ಕಡಿಮೆ ಇಡೀ ಸಿನಿಮಾವನ್ನೇ ವ್ಯಾಪಿಸಿಕೊಂಡಿರುತ್ತಾನೆ. ರಮ್ಯಾ ಕನ್ನಡ ಚಿತ್ರವನ್ನು ಒಂದಿಡೀ ದಶಕಗಳ ಕಾಲ ಆಳಿದ ಅನಭಿಷಿಕ್ತ ರಾಣಿ ಅಂತ ಘೋಷಿಸುವ ನಾವು ಅವರು ಆಳಿದ್ದು ಅಂತಃಪುರವನ್ನು ಮಾತ್ರ ಅನ್ನುವುದನ್ನು ತೇಲಿಸಿಬಿಡುತ್ತೇವೆ.

ಆದರೆ ಸಿಲ್ಕ್ ಸಖತ್ ಹಾಟ್ ಮಗಾ ಅಥವಾ ಅಭಿನೇತ್ರಿ ರಾಗಿಣಿ ಐಪಿಎಸ್‌ನಂತಹಾ ಸಿನಿಮಾಗಳು ಬಂದಾಗ ನಾಯಕಿಯೇ ಹೀರೋ ಆಗುವ ಅವಕಾಶಗಳು ಸಿಗುತ್ತವೆ. ಆಗಲೂ ನಾಯಕಿಯ ಸಂಭಾವನೆ ಏರುವುದು ಅಷ್ಟಕ್ಕಷ್ಟೇ ಬಿಡಿ. ಏಕೆಂದರೆ ಹೀರೋಯಿನ್ ಓರಿಯಂಟೆಡ್ ಸಿನಿಮಾ ಮೂಲಕ ನಾಯಕಿಗೆ ನಾಯಕನ ಇಮೇಜ್ ಕೊಡೋದೇ ನಿರ್ಮಾಪಕ ಕೊಡುವ ದೊಡ್ಡ ಗಿಫ್ಟ್ ಮತ್ತುಅದು ನಿರ್ಮಾಪಕ ತೆಗೆದುಕೊಳ್ಳುವ ದೊಡ್ಡ ರಿಸ್ಕ್ ಕೂಡ ಆಗಿರುತ್ತೆ.

ಸಂಭಾವನೆಯ ವಿಚಾರದಲ್ಲಿ ಸಮಾನತೆಯ ಪ್ರಶ್ನೆ ಎತ್ತಿರುವುದು ತಪ್ಪಲ್ಲ. ಈ ಹಿಂದೆ ಕೂಡ ಇದೇ ವಿಚಾರವಾಗಿ ಮೋಹಕತಾರೆ ರಮ್ಯಾ-ದೊಡ್ಮನೆ ಹುಡುಗ ಚಿತ್ರಕ್ಕೆ ಆಯ್ಕೆಯಾಗಿ ಚಿತ್ರದಿಂದ ಹೊರನಡೆದಿದ್ದರು. ನಾಯಕನ ಸಂಭಾವನೆ ಹೆಚ್ಚಿರುವುದು ಎಲ್ಲಾ ಚಿತ್ರರಂಗಗಳಲ್ಲೂ ಸಾಮಾನ್ಯ. ಸ್ಟಾರ್ ನಟಿ ಎನಿಸಿಕೊಂಡ ನಂತರ ನಾಯಕಿಗೂ ಒಳ್ಳೆಯ ಸಂಭಾವನೆ ಸಿಕ್ಕುತ್ತೆ ಅಂತ ಹೇಳುವವರಿದ್ದಾರೆ. ಆದರೆ ನಿಜವಾಗಿಯೂ ನಾಯಕನ ಸಂಭಾವನೆ ಯಾಕೆ ಹೆಚ್ಚಿರುತ್ತೆ ಗೊತ್ತಾ? ನಾಯಕ ವರ್ಷದಲ್ಲಿ ನಾಲ್ಕು ಸಿನಿಮಾ ಮಾಡುವುದಿಲ್ಲ. ಅವನು ಒಂದು ಸಿನಿಮಾಗೆ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಹೆಚ್ಚೆಂದರೆ ಎರಡು. ಆದರೆ ನಾಯಕಿಗೆ ವರ್ಷಕ್ಕೆ ನಾಲ್ಕಾದರೂ ಸಿನಿಮಾಗಳು ಬೇಕೇ ಬೇಕು. ನಾಲ್ಕು ಸಿನಿಮಾ ಇಲ್ಲದಿದ್ದರೆ ಆ ನಾಯಕಿಗೆ ಬೇಡಿಕೆ ಇಲ್ಲ ಅಂತಾನೇ ಗಾಂಧಿನಗರ ನಿರ್ಧರಿಸಿಬಿಡುತ್ತೆ. ಹೀರೋ ಒಬ್ಬ ವರ್ಷವಿಡೀ 1 ಸಿನಿಮಾದಿಂದ ಎರಡು ಕೋಟಿ ದುಡಿದರೆ, ಅದೇ ಒಂದು ವರ್ಷದಲ್ಲಿ 4-5 ಸಿನಿಮಾ ಮಾಡುವ ನಾಯಕಿ ಅಷ್ಟೇ ಹಣವನ್ನು ದುಡಿಯುತ್ತಿದ್ದಾರಲ್ಲವಾ? ಬೇಕಿದ್ದರೆ ಐಂದ್ರಿತಾ ಅವರ ಸಿನಿಮಾ ಪಟ್ಟಿಯನ್ನು ನೋಡಿ ಹಲವು ವರ್ಷ 4-5 ಸಿನಿಮಾ ಮಾಡಿದ್ದಾರೆ. ಇನ್ನು ಹೀರೋನ ತರಹ ಹೀರೋಯಿನ್ ಮೈ ಕೈ ನೋಯಿಸಿಕೊಳ್ಳಬೇಕು ಅಂತಿಲ್ಲ. ಅಬ್ಬರಿಸಿ ಬೊಬ್ಬಿರಿಯುವ ಡೈಲಾಗ್ ಹೇಳಿ ಸುಸ್ತು ಮಾಡಿಕೊಳ್ಳಬೇಕು ಅಂತಿಲ್ಲ. ನಾಯಕನಷ್ಟು ಡೈಲಾಗ್‌ಗಳ ಡಬ್ಬಿಂಗ್ ಕೂಡ ಇರೋದಿಲ್ಲ. ಇನ್ನು ಸೌಲಭ್ಯಗಳ ವಿಚಾರದಲ್ಲಿ ಸ್ಟಾರ್ ನಟಿಯಾದ ನಂತರ ಯಾರೂ ಸೌಲಭ್ಯಗಳಿಲ್ಲದೆ ಕೆಲಸ ಮಾಡೋದಿಲ್ಲ. ಆದರೆ ಅಲ್ಲಿಯವರೆಗೂ ಕಷ್ಟಪಡಲೇಬೇಕಲ್ಲ. ಕಾಸಿಗೆ ತಕ್ಕಂತೆ ಕಜ್ಜಾಯ ಅಲ್ಲವಾ ?

Write A Comment