ವಾಷಿಂಗ್ಟನ್ (ಪಿಟಿಐ): ಚೀನಾ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದ್ದು, ಭಾರತದ ಗಡಿಯುದ್ಧಕ್ಕೂ ಹೆಚ್ಚಿನ ಪಡೆಗಳನ್ನು ನಿಯೋಜಿಸಿದೆ ಎಂದು ಅಮೆರಿಕದ ರಕ್ಷಣಾ ಸಚಿವಾಲಯ ಪೆಂಟಗಾನ್ ಹೇಳಿದೆ.
‘ಚೀನಾ ಸೇನೆಯು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಮತ್ತು ಭಾರತದ ಗಡಿಯುದ್ದಕ್ಕೂ ಅಧಿಕ ಪಡೆಗಳನ್ನು ನಿಯೋಜನೆ ಮಾಡಿರುವುದುನ್ನು ನಾವು ಗಮನಿಸಿದ್ದೇವೆ’ ಎಂದು ಪೂರ್ವ ಏಷ್ಯಾ ವಲಯದ ಉಪ ಸಹಾಯಕ ರಕ್ಷಣಾ ಕಾರ್ಯದರ್ಶಿ ಅಬ್ರಹಾಂ ಎಂ. ಡೆನ್ಮಾರ್ಕ್ ತಿಳಿಸಿದ್ದಾರೆ.
ಅಮೆರಿಕದ ಸಂಸತ್ತಿಗೆ ‘ಚೀನಾ ಸೇನೆ ಹಾಗೂ ಭದ್ರತಾ ಬೆಳವಣಿಗೆಗಳು’ ಕುರಿತ ವರದಿ ಸಲ್ಲಿಕೆ ಬಳಿಕ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇನಾ ನಿಯೋಜನೆ ಹಿಂದಿನ ನಿಜವಾದ ಉದ್ದೇಶವನ್ನು ಗ್ರಹಿಸುವುದು ಕಷ್ಟ ಎಂದಿದ್ದಾರೆ.
‘ಈ ನಿಯೋಜನೆಯ ಹಿಂದೆ ಆಂತರಿಕ ಸ್ಥಿರತೆ ಕಾಪಾಡುವ ಉದ್ಧೇಶ ಎಷ್ಟಿದೆ ಮತ್ತು ಬಾಹ್ಯ ಸ್ಥಿರತೆ ಪರಿಶೀಲನೆಯ ಉದ್ದೇಶ ಎಷ್ಟು ಎಂದು ಹೇಳುವುದು ಕಷ್ಟ’ ಎಂದು ಟಿಬೇಟ್ನಲ್ಲಿ ಚೀನಾ ಸೇನೆಯ ಮೇಲ್ದರ್ಜೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.
ಇದೇ ವೇಳೆ, ವಿಶ್ವದ ವಿವಿಧ ಭಾಗಗಳಲ್ಲಿ ಸೇನಾ ನೆಲೆ ವಿಸ್ತರಿಸುತ್ತಿರುವ ಚೀನಾ ನಡೆಯ ಕುರಿತು ಪೆಂಟಗಾನ್ ಎಚ್ಚರಿಕೆ ನೀಡಿದೆ.