ಬೆಂಗಳೂರು, ಮೇ ೧೦- ರಾಜ್ಯದ ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ಎಡವಿದ್ದು, ಬರ ಪರಿಹಾರ ಕಾಮಗಾರಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ, ಮೇವಿನ ಅಭಾವವಿದ್ದು, ಕೂಡಲೇ ತಾವು ಮಧ್ಯ ಪ್ರವೇಶಿಸಿ ಬರ ನಿರ್ವಹಣೆಯ ಬಗ್ಗೆ ಸರ್ಕಾರಕ್ಕೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು ಎಂದು ರಾಜ್ಯ ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿದೆ.
ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಮುಖಂಡರ 12 ತಂಡಗಳು ಪ್ರವಾಸ ನಡೆಸಿ ಸಿದ್ದಪಡಿಸಿರುವ ಬರ ವರದಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದ ಬಿಜೆಪಿ ಮುಖಂಡರ ನಿಯೋಗ ರಾಜ್ಯಪಾಲರಿಗೆ ಇಂದು ಸಲ್ಲಿಸಿತು.
ಈ ವರದಿಯಲ್ಲಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ತಲೆದೋರಿರುವ ವಸ್ತುಸ್ಥಿತಿಯನ್ನು ಬಿಜೆಪಿ ವಿವರಿಸಿದ್ದು, ಎಲ್ಲೆಡೆ ಕುಡಿಯುವ ನೀರಿನ ಹಾಹಾಕಾರ, ಜಾನುವಾರುಗಳಿಗೆ ಮೇವಿನ ಕೊರತೆ, ವಿದ್ಯುತ್ ಅಭಾವವಿದ್ದು, ಗ್ರಾಮೀಣ ಜನತೆ ಅದರಲ್ಲೂ ರೈತಾಪಿ ವರ್ಗ ಅಸಹಾಯಕ ಸ್ಥಿತಿಯಲ್ಲಿ ಇರುವುದನ್ನು ಎಳೆಎಳೆಯಾಗಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರ ಸಾಕಷ್ಟು ಹಣ ನೀಡಿದರೂ ರಾಜ್ಯ ಸರ್ಕಾರ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುತ್ತಿಲ್ಲ. ಕೂಡಲೇ ತಾವು ಮಧ್ಯ ಪ್ರವೇಶಿಸಿ ರಾಜ್ಯ ಸರ್ಕಾರಕ್ಕೆ ಬರ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸ್ಪಷ್ಟ ನಿರ್ದೇಶನ ನೀಡುವಂತೆ ಮನವಿ ಮಾಡಿದೆ.
ರಾಜ್ಯದ ಬೀದರ್, ಕಲ್ಬುರ್ಗಿ, ರಾಯಚೂರು, ಚಿತ್ರದುರ್ಗ, ತುಮಕೂರು ಸೇರಿದಂತೆ ಬರ ಪೀಡಿತ ಜಿಲ್ಲೆಗಳ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಬಿಜೆಪಿ ಈ ವರದಿಯಲ್ಲಿ ಸಲ್ಲಿಸಿದೆ.
ಸಾಲ ಮನ್ನಾಕ್ಕೆ ಮನವಿ
ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ರೈತರ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಬೇಕು ಎಂಬ ಮನವಿಯನ್ನು ಬಿಜೆಪಿ ಮಾಡಿದೆ ಎಂದು ರಾಜ್ಯಪಾಲರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮುಂದಿನ ಮುಂಗಾರು ಹಂಗಾಮಿಗೆ ರೈತರಿಗೆ ಉಚಿತವಾಗಿ ಗೊಬ್ಬರ ಹಾಗೂ ಬೀಜವನ್ನು ಒದಗಿಸಬೇಕು. ಬರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿರುವುದನ್ನು ರಾಜ್ಯಪಾಲರ ಗಮನಕ್ಕೆ ತಂದಿದ್ದೇವೆ. ಕುಡಿಯುವ ನೀರಿನ ಹಾಹಾಕಾರ ಇರುವುದನ್ನು ರಾಜ್ಯಪಾಲರಿಗೆ ತಿಳಿಸಿ, ನೀರಿನ ಅಭಾವ ಇರುವ ಕಡೆ ರೈಲುಗಳ ಮೂಲಕ ನೀರನ್ನು ಒದಗಿಸುವಂತೆಯೂ ಮನವಿ ಮಾಡಿದ್ದೇವೆ. ಹಾಗೆಯೇ ಜಾನುವಾರುಗಳ ಮೇವಿನ ಕೊರತೆ ನೀಗಿಸಲು ರೈಲಿನ ಮುಖಾಂತರ ಉತ್ತರ ರಾಜ್ಯಗಳಿಂದ ಮೇವು ತರುವಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂಬ ಮನವಿಯನ್ನು ರಾಜ್ಯಪಾಲರಿಗೆ ಮಾಡಲಾಗಿದೆ ಎಂದರು.
ಅಗತ್ಯವಿರುವ ಕಡೆ ಗೋಶಾಲೆ, ವಿದ್ಯುತ್ ಒದಗಿಸುವಂತೆಯೂ ಮನವಿ ಮಾಡಿದ್ದೇವೆ. ರಾಜ್ಯದ ಎಲ್ಲ 150 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂಬ ಒತ್ತಾಯವನ್ನು ಮಾಡಲಾಗಿದೆ ಎಂದರು.
ಮೂರು ವರ್ಷದ ಸಾಧನೆ ಶೂನ್ಯ
ರಾಜ್ಯದ ಕಾಂಗ್ರೆಸ್ ಸರ್ಕಾರ 3 ವರ್ಷ ಪೂರೈಸುತ್ತಿದೆ. ಈ ಸರ್ಕಾರದ ಸಾಧನೆ ಶೂನ್ಯ. ಅಭಿವೃದ್ಧಿಯೂ ಶೂನ್ಯವೆಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪನವರು, ರಾಜ್ಯದಲ್ಲಿ ಬರ ಇದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿ ಅಲುಗಾಡುವ ಭೀತಿಯಿಂದ ಸಚಿವ ಸಂಪುಟ ಪುನರ್ ರಚಿಸುವುದಾಗಿ ಹೇಳುತ್ತಿದ್ದಾರೆ. ಇದು ನಾಚಿಕೆಗೇಡು ಎಂದು ಟೀಕಿಸಿದರು.
ಬರ ಪ್ರವಾಸ ನಡೆಸಿದ ಮುಖ್ಯಮಂತ್ರಿಗಳಾಗಲಿ, ಸಚಿವರಾಗಲಿ ಸಾರ್ವಜನಿಕರ ಅಹವಾಲು ಆಲಿಸಿಲ್ಲ. ಸಾರ್ವಜನಿಕರ ಅಹವಾಲು ಆಲಿಸಿದರೆ ಎಲ್ಲಿ ಜನ ಬಡಿಗೆಯಿಂದ ಬಡಿಯುತ್ತಾರೋ ಎಂಬ ಭೀತಿ ಇವರದ್ದು ಎಂದು ಹರಿಹಾಯ್ದರು.
ಕೇಂದ್ರ ಸರ್ಕಾರ ಸಾಕಷ್ಟು ನೆರವು ನೀಡಿದರೂ ಕೇಂದ್ರ ಮೇಲೆ ದೂಷಣೆ ಮಾಡುವುದನ್ನು ಬಿಟ್ಟು ಸರ್ಕಾರ ಬೇರೇನೂ ಮಾಡುತ್ತಿಲ್ಲ. ತನ್ನ ಬೊಕ್ಕಸದಿಂದಲೂ ಸಾವಿರ ಕೋಟಿ ಹಣ ಖರ್ಚು ಮಾಡಲಿ ಎಂದು ಯಡಿಯೂರಪ್ಪನವರು ಆಗ್ರಹಿಸಿದರು.
ಸಿ.ಟಿ. ರವಿ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಹಾಗೂ ಶಾಸಕ ಸಿ.ಟಿ. ರವಿ, ಬಿಜೆಪಿ ಮುಖಂಡರು ಬರ ಪ್ರದೇಶಗಳಲ್ಲಿ ನಡೆಸಿರುವ ಅಧ್ಯಯನ ವರದಿಯನ್ನು ಇನ್ನೆರಡು ಮೂರು ದಿನಗಳಲ್ಲಿ ಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಲಾಗುವುದು ಎಂದರು.
ಈ ವರದಿಯಲ್ಲಿ ಬಿಜೆಪಿ ಮುಖಂಡರ ತಂಡ ಪ್ರವಾಸ ನಡೆಸಿರುವ ಪ್ರದೇಶಗಳ ವಸ್ತುಸ್ಥಿತಿ, ಅಲ್ಲಿನ ಸಮಸ್ಯೆಗಳು, ಜನರ ಸಂಕಷ್ಟ ಎಲ್ಲವನ್ನು ಒಳಗೊಂಡ ಸಮಗ್ರ ಮಾಹಿತಿ ಇರುತ್ತದೆ ಎಂದರು.
ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಮಾಜಿ ಸಚಿವ ಹಾಗೂ ಶಾಸಕ ಎಸ್. ಸುರೇಶ್ಕುಮಾರ್, ಸಿ.ಟಿ. ರವಿ, ಮುಖಂಡರಾದ ಅರಗ ಜ್ಞಾನೇಂದ್ರ, ಪಕ್ಷದ ವಕ್ತಾರರಾದ ಮಂಜುಳ ಸೇರಿದಂತೆ ಹಲವು ಮುಖಂಡರು ಇದ್ದರು.
ಕರ್ನಾಟಕ