ಮೈಸೂರು: ಮಹದಾಯಿ ವಿವಾದ ಸದ್ಯ ನ್ಯಾಯಾಧಿಕರಣದ ಮುಂದಿದ್ದು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಆದರೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರ್ರಿಕ್ಕರ್ ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಮಹದಾಯಿ ನೀರು ಹಂಚಿಕೆ ವಿವಾದವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ. ಈ ವಿವಾದ ಜಲ ನ್ಯಾಯಾಧಿಕರಣದ ಮುಂದಿರುವ ಕಾರಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಲು ಸಾಧ್ಯವಿಲ್ಲ. ಅಲ್ಲದೆ, ಈ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳು ಸಭೆ ನಡೆಸಿ, ವಿವಾದ ಪರಿಹರಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.
ತಾವು ಈ ಹಿಂದೆ ಗೋವಾ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಹದಾಯಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧಿಕರಣದ ಹೊರಗೆ ಬಗೆಹರಿಸಲು ಇಚ್ಛಿಸಿದ್ದೆ. ಆದರೆ, ಕರ್ನಾಟಕ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯಲಿಲ್ಲ. ಹೀಗಾಗಿ, ಈ ವಿವಾದ ನ್ಯಾಯಾಧಿಕರಣದ ಮೆಟ್ಟಿಲೇರಿತು. ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು ಮುಕ್ತ ಮನಸ್ಸಿನಿಂದ ಮುನ್ನಡೆದರೆ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ.
ಹೀಗಾಗಿ, ಯಾರಿಗೆ ಇದರ ಅವಶ್ಯಕತೆಯಿದೆಯೋ ಅವರು ಇದನ್ನು ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದರು.
ಮಹದಾಯಿ ವಿವಾದದಲ್ಲಿ ಕರ್ನಾಟಕ ಹಾಗೂ ಗೋವಾ ರಾಜ್ಯಗಳು ಹೆಚ್ಚಾಗಿ ತಲೆಕೆಡಿಸಿಕೊಂಡಿವೆ. ಇದರಲ್ಲಿ ಮಹಾರಾಷ್ಟ್ರದ ಪಾತ್ರ ತೀರಾ ಕಡಿಮೆ. ವಿವಾದ ಬೆಳೆದ ಪರಿಣಾಮ ಗೋವಾ ಮತ್ತು ಕರ್ನಾಟಕದಲ್ಲಿ ಇದು ಸೂಕ್ಷ್ಮ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.
-ಉದಯವಾಣಿ