
ದಾವಣಗೆರೆ: ಅಮಾವಾಸ್ಯೆ ಪೂಜೆಗೆಂದು ತುಂಗಾಭದ್ರ ನದಿ ದಾಟಿ ಬರುತ್ತಿದ್ದ ಮೂವರು ನೀರು ಪಾಲಾದ ಘಟನೆ ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದ ಬಳಿ ಇಂದು ಬೆಳಗ್ಗೆ ನಡೆದಿದೆ.
ರಾಣೇಬೆನ್ನೂರು ತಾಲ್ಲೂಕಿನ ಕುಪೇಲೂರು ಗ್ರಾಮದ ಯಲ್ಲಮ್ಮ ಬಸಪ್ಪ ಆಡಿನವರು (40), ದೇವರಾಜ ಆಡಿನವರು (12), ನಂದೀಶ ಆಡಿನವರು (6) ಎಂಬ ಮೂವರು ನೀರು ಪಾಲಾಗಿದ್ದಾರೆ. ಇಂದು ಅಮಾವಾಸ್ಯೆ ಪ್ರಯುಕ್ತ ಹರಿಹರ ತಾಲ್ಲೂಕು ಎಳೆಹೊಳೆ ಗ್ರಾಮದ ಬೀರಪ್ಪ ದೇವರಿಗೆ ಪೂಜೆ ಸಲ್ಲಿಸಲೆಂದು ರಾಣೇಬೆನ್ನೂರು ತಾಲ್ಲೂಕಿನ ಕುಪೇಲೂರು ಗ್ರಾಮದ ಒಂದೇ ಕುಟುಂಬದ 6 ಜನರು ತೆಪ್ಪದಲ್ಲಿ ನದಿ ದಾಟುತ್ತಿದ್ದಾಗ ಬೃಹತ್ ಗುಂಡಿಯಲ್ಲಿ ತೆಪ್ಪ ಮುಳುಗಿದ ಪರಿಣಾಮ ಎರಡು ಮಕ್ಕಳು ಸೇರಿದಂತೆ ಮೂವರು ನೀರು ಪಾಲಾಗಿದ್ದಾರೆ.
ಇನ್ನು ಮೂವರು ಮತ್ತು ನಾವಿಕ ಸೇರಿ ನಾಲ್ವರು ದಡ ಸೇರಿದ್ದಾರೆ ಅಮಾವಾಸ್ಯೆ ಪ್ರಯುಕ್ತ ಇಂದು ಬೆಳಗ್ಗೆ ತುಂಗಾಭದ್ರ ನದಿ ದಾಟಿ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ತುಂಗಾಭದ್ರ ನದಿಯಲ್ಲಿ ಹೇಳಿಕೊಳ್ಳುವಷ್ಟು ನೀರಿಲ್ಲದಿದ್ದರು ಮರಳಿಗಾಗಿ ತೋಡಿದ ಬೃಹತ್ ಗುಂಡಿಗಳೇ ಈ ದುರ್ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಾರ್ವಜನಿಕರು ಹರಿಹರ ತಾಲ್ಲೂಕು ಮಲೇಬೆನ್ನೂರು ಪೊಲೀಸರು ಶವಗಳನ್ನು ಹೊರ ತೆಗೆದು ಪರಿಶೀಲನೆ ನಡೆಸಿದ್ದಾರೆ.