ಬೆಂಗಳೂರು, ಮೇ ೫- ಜಾತಿವಾರು ಗಣತಿಯ ವರದಿ ಸಿದ್ದಪಡಿಸುವ ಕಾರ್ಯ ಬಹುತೇಕ ಪೂರ್ಣವಾಗಿದ್ದು, ಈ ತಿಂಗಳ ಅಂತ್ಯದಲ್ಲಿ ವರದಿ ಸಿದ್ದವಾಗಲಿದೆ ಎಂದು ಸಮಾಜ ಕಲ್ಯಾಣ ಸಚಿವ ಹೆಚ್. ಆಂಜನೇಯ ಹೇಳಿದರು.
ಜಾತಿ ಗಣತಿಯ ವರದಿ ಇದುವರೆಗೂ ಬಹಿರಂಗವಾಗಿಲ್ಲ, ಸೋರಿಕೆಯೂ ಆಗಿಲ್ಲ. ಈ ತಿಂಗಳ ಅಂತ್ಯಕ್ಕೆ ವರದಿ ಸರ್ಕಾರದ ಕೈ ಸೇರಲಿದೆ ಎಂದು ಅವರು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ತಿಳಿಸಿದರು.
ಅರಣ್ಯ ವಾಸಿಗಳನ್ನು ಅರಣ್ಯದಿಂದ ಹೊರತಂದು ಪುನರ್ವಸತಿ ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ. ಅರಣ್ಯದಿಂದ ಹೊರಬಂದು ನಗರದಲ್ಲಿ ಬದುಕು ಕಟ್ಟಿಕೊಳ್ಳುವವರಿಗೆ 10 ಲಕ್ಷ ರೂ. ನಗದು, ಕಂದಾಯ ಭೂಮಿ ನೀಡಲಾಗುತ್ತದೆ. ಅರಣ್ಯ ವಾಸಿಗಳ ಮಕ್ಕಳಿಗೆ ವಸತಿ ಶಾಲೆಯನ್ನು ತೆರೆಯಲಾಗುವುದು ಎಂದು ಅವರು ಹೇಳಿದರು.
ದಕ್ಷಿಣ ಕನ್ನಡದಲ್ಲಿ ಇರುವ ಕೊರವ ಜನಾಂಗದ ಜನಸಂಖ್ಯೆ ಕಡಿಮೆಯಾಗಿದೆ. 2011ರ ಜನಗಣತಿಯಲ್ಲಿ ಕೊರಗ ಜನಾಂಗದವರು 6327 ಇದ್ದಾರೆ ಎಂಬ ಮಾಹಿತಿ ಇದೆ. ಆದರೆ ಪ್ರಸ್ತುತ ಅದು 4860ಕ್ಕೆ ಇಳಿದಿದೆ. ಕೊರವ ಹಾಗೂ ಜೇನು ಕುರುಬರಿಗೆ ಸರ್ಕಾರ ವಿಶೇಷ ಸವಲತ್ತು ನೀಡುತ್ತಿದೆ. ಈ ಜನಾಂಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನೂ ನೀಡಲಾಗುತ್ತಿದೆ ಎಂದರು.
ಮೈಸೂರು-ಕೊಡಗು ಜಿಲ್ಲೆಗಳಲ್ಲಿ ಅರಣ್ಯ ವಾಸಿಗಳ ಸಮೀಕ್ಷೆ ಮುಗಿದಿದ್ದು, ಮುಂದಿನ ತಿಂಗಳ ಉಡುಪಿ ಜಿಲ್ಲೆಯಲ್ಲಿ ಈ ಜನಾಂಗದ ಸಮೀಕ್ಷಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ಈ ಜನಾಂಗದವರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮ ಈ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಲಿದೆ ಎಂದು ಅವರು ಹೇಳಿದರು.
ಹುದ್ದೆ ಭರ್ತಿ
ರಾಜ್ಯದ ವಸತಿ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಕರ್ನಾಟಕ