ಮುಂಬೈ,ಮೇ.5: ಬಾಂಬೆ-ಐಐಟಿ ಕ್ಯಾಂಪಸ್’ಗೆ ದಾಖಲಾಗುವ ಹೊಸ ವಿದ್ಯಾರ್ಥಿಗಳಲ್ಲಿ ಶೇ.95 ಮಂದಿ ಕನ್ಯತ್ವ ಉಳಿಸಿಕೊಂಡಿದ್ದರೆ, ಶೇ.75 ಮಂದಿಗೆ ಸಲಿಂಗಕಾಮ ಹೊಂದಿದ್ದರೆ ಯಾವುದೇ ತಪ್ಪಿಲ್ಲ ಎನ್ನುತ್ತಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಐಐಟಿ-ಬಿ ವಿದ್ಯಾರ್ಥಿ ಪತ್ರಿಕೆ ‘ಇನ್’ಸೈಟ್’ ನಡೆಸಿದ ವಿವಿಧ ರೀತಿಯ ಸಮೀಕ್ಷೆಯಲ್ಲಿ ಈ ಅಂಶವನ್ನು ಹೊರಹಾಕಿದೆ. ಒಟ್ಟು 875 ಹೊಸ ವಿದ್ಯಾರ್ಥಿಗಳಲ್ಲಿ 254 ವಿದ್ಯಾರ್ಥಿಗಳನ್ನು ಈ ಸಮೀಕ್ಷೆಗೆ ಒಳಪಡಿಸಿಕೊಳ್ಳಲಾಗಿದ್ದು, ಕ್ಯಾಂಪಸ್’ಗೆ ದಾಖಲಾಗುವ ಮುನ್ನ ಅವರ ಹಿನ್ನೆಲೆ, ರಾಜಕೀಯ, ಧಾರ್ಮಿಕ ವಿಷಯಗಳು ಹಾಗೂ ಇತರ ವಿಷಯಗಳನ್ನು ಕಲೆ ಹಾಕಿ ಸಮೀಕ್ಷೆ ನಡೆಸಲಾಗಿದೆ.
‘ಶೇ. 60 ಮಂದಿಗೆ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯಿಲ್ಲ, ಆದರೆ ಶೇ.30 ಮಂದಿಗೆ ಸ್ವಲ್ಪ ಆಸಕ್ತಿಯಿದೆ. ದೇವರ ಬಗ್ಗೆ ಪ್ರಶ್ನಿಸಿದಾಗ ಶೇ.18 ಮಂದಿ ನಾಸ್ತಿಕರು, ಶೇ.35 ಮಂದಿ ನಿರೀಶ್ವರವಾದಿಗಳಾಗಿದ್ದರೆ, ಶೇ.47 ಮಂದಿಗೆ ದೇವರ ಬಗ್ಗೆ ನಂಬಿಗೆಯಿದೆ. ಬಹುತೇಕ ವಿದ್ಯಾರ್ಥಿಗಳು ಸ್ಮಾರ್ಟ್’ಫೋನ್ ಹೊಂದಿದ್ದು, ನಿತ್ಯ 1.6 ಗಂಟೆಯನ್ನು ಫೇಸ್’ಬುಕ್’ಗೆ ಭೇಟಿ ನೀಡಲು ಉಪಯೋಗಿಸುತ್ತಾರೆ. ಆದರೆ ಇತ್ತೀಚಿಗೆ ಫೇಸ್’ಬುಕ್’ಗೆ ಭೇಟಿ ನೀಡುವವರ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಸಮೀಕ್ಷೆಯ ವರದಿ ಹೇಳುತ್ತದೆ.
‘ಶೇ.75 ಮಂದಿ ವಿದ್ಯಾರ್ಥಿಗಳು 2.5 ಲಕ್ಷ ರೂ. ಹಣವನ್ನು ಜೆಇಇ ಕೋಚಿಂಗ್’ಗಾಗಿ ಬಳಸುತ್ತಾರೆ. ಕ್ಯಾಂಪಸ್’ನ ವಿದ್ಯಾರ್ಥಿಗಳು ನಿತ್ಯ ಸರಾಸರಿ 1.4 ಗಂಟೆಯನ್ನು ಓದುವುದಕ್ಕೆ ಮೀಸಲಿಡುತ್ತಾರೆ. ಪದವಿ ಪಡೆದು ಹೊರಹೋದ ನಂತರ ಶೇ.32 ಮಂದಿಗೆ ವಾರ್ಷಿಕ ವೇತನ 10 ಲಕ್ಷ ರೂ.ನಿಂದ 25 ಲಕ್ಷ ರೂ.ವರೆಗೆ ಇರಬೇಕೆಂದು ಅಪೇಕ್ಷಿಸಿದರೆ, ಶೇ.11 ಮಂದಿ 60 ಲಕ್ಷ ರೂ.ಗಳವರೆಗೆ ಬೇಡಿಕೆಯಿಡುವುದಾಗಿ ಅಪೇಕ್ಷಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.
