ಗೋರಖ್‌ಪುರ : “ಮದುವೆಯಾಗಿ ನೀವು ನಿಮ್ಮ ಪುರುಷತ್ವವನ್ನು ಸಾಬೀತುಪಡಿಸಿ’ ಎಂದು ವಿವಾದಾತ್ಮಕ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರಿಗೆ ಸಮಾಜವಾದಿ ಪಕ್ಷದ ನಾಯಕ ಆಝಂ ಖಾನ್ ಅವರು ಸವಾಲು ಹಾಕಿದ್ದಾರೆ.
ಸಂಸದ ಯೋಗಿ ಆದಿತ್ಯನಾಥ್ ಅವರೊಂದಿಗಿನ ಸಂಬಂಧಗಳನ್ನು ನೀವು ಸುಧಾರಿಸಿಕೊಳ್ಳಲು ಬಯಸುವಿರಾ ? ಎಂದು ಮಾಧ್ಯಮ ಮಂದಿ ಕೇಳಿದ ಪ್ರಶ್ನೆಗೆ ಮಾರ್ಮಿಕವಾಗಿ ಉತ್ತರಿಸಿದ ಆಝಂ ಖಾನ್, “ಆದಿತ್ಯನಾಥ್ ಅವರು ಎಲ್ಲಕ್ಕಿಂತ ಮೊದಲು ಮದುವೆ ಮಾಡಿಕೊಳ್ಳಬೇಕು ಮತ್ತು ಆ ಮೂಲಕ ಅವರು ತಮ್ಮ ಸಂತತಿಯನ್ನು ಹೆಚ್ಚಿಸಿಕೊಳ್ಳಬೇಕು, ಆಗಲೇ ಅವರು ತಮ್ಮ ಪುರುಷತ್ವವನ್ನು ಸಾಬೀತುಪಡಿಸಿದಂತಾಗುತ್ತದೆ’ ಎಂದು ಹೇಳಿದರು.
ಮುಸ್ಲಿಂ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ತ್ರಿವಳಿ ತಲಾಕ್ ಕ್ರಮದಿಂದ ಮುಸ್ಲಿಂ ಮಹಿಳೆಯರಿಗೆ ತುಂಬಾ ಅನ್ಯಾಯವಾಗುತ್ತಿದೆ ಎಂದು ಈಚೆಗೆ ಟೀಕಿಸಿದ್ದ ಬಿಜೆಪಿಯ ಉನ್ನಾವೋ ಕ್ಷೇತ್ರದ ಸಂಸದರಾಗಿರುವ ಸಾಕ್ಷಿ ಮಹರಾಜ್ ಅವರ ವಿರುದ್ಧವೂ ಆಝಂ ಖಾನ್ ಈ ಸಂದರ್ಭದಲ್ಲಿ ಕಿಡಿ ಕಾರಿದರು.
“ಸಣ್ಣ ವಯಸ್ಸಿನ ಹುಡುಗಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತಿರುವ ವ್ಯಕ್ತಿಯ ಬಗ್ಗೆ ಮಾತನಾಡುವುದು ಕೂಡ ಒಂದು ಅವಮಾನವೇ ಸರಿ’ ಎಂದು ಆಝಂ ಖಾನ್ ಅವರು ಮೌಲಾನಾ ಮೊಹಮ್ಮದ್ ಜೌಹರ್ ವಿಶ್ವವಿದ್ಯಾಲಯದ ಸಮಾರಂಭದ ಪಾರ್ಶ್ವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಾಕ್ಷಿ ಮಹರಾಜ್ ಗೆ ಟಾಂಗ್ ನೀಡಿದರು.
ರಾಜ್ಯ ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಆಝಂ ಖಾನ್ ಈ ಹಿಂದೆಯೂ ತಮ್ಮ ಉರಿ ನಾಲಗೆಯ ಹೇಳಿಕೆಗಳಿಂದ ವಿವಾದಗಳನ್ನು ಸೃಷ್ಟಿಸುತ್ತಲೇ ಬಂದಿದ್ದಾರೆ.
-ಉದಯವಾಣಿ