ಡೆಹ್ರಾಡೂನ್, ಮೇ 4- ಉತ್ತರಾಖಂಡದಲ್ಲಿ ಅಪಾರ ಅರಣ್ಯ ನಾಶಕ್ಕೆ ಕಾರಣವಾದ ಕಾಡ್ಗಿಚ್ಚು ಶಮನಕ್ಕೆ ವರುಣ ದೇವ ಕೃಪೆ ತೋರಿದ್ದಾನೆ. ಕಾಡ್ಗಿಚ್ಚು ನಂದಿಸಲು ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸೇರಿ ಸೇನಾ ಹೆಲಿಕಾಪ್ಟರ್ ಬಳಸಿ ಯುದ್ಧೋಪಾದಿಯಲ್ಲಿ ನಡೆಸುತ್ತಿದ್ದ ಕಾರ್ಯಾಚರಣೆಗೆ ಈಗ ನಿಸರ್ಗವೇ ಸ್ಪಂದಿಸಿದಂತಾಗಿದೆ. ಜನತೆ ಮತ್ತು ಸರ್ಕಾರಕ್ಕೆ ಇದರಿಂದ ಸಾಕಷ್ಟು ನೆಮ್ಮದಿ ದೊರಕಿದಂತಾಗಿದೆ. ರುದ್ರಪ್ರಯಾಗ, ಕೇದಾರನಾಥ್, ಗೌರಿಕುಂಡ, ಚಮೋಲಿ ಮತ್ತು ಉತ್ತರಕಾಶಿ, ಪಿತೋರ್‌ಘರ್ ಜಿಲ್ಲೆಯ ಕೆಲಭಾಗದಲ್ಲಿ ವರ್ಷಧಾರೆಯಾಗಿದೆ. ರಾಜ್ಯದ ಹಲವು ಪ್ರದೇಶಗಳಲ್ಲೂ ಬುಧವಾರ ಬೆಳಗಿನ ವರೆಗೆ ಸಾಧಾರಣ ಸುರಿದಿದೆ. ಬಿಸಿಲ ಬೇಗೆ ಮತ್ತು ಕಾಡ್ಗಿಚ್ಚಿನ ತಾಪದಿಂದ ಬೆಂದುಹೋಗಿದ್ದ ನಾಡಿಗೆ ವರುಣದೇವ ತಂಪೆರೆದಿದ್ದಾನೆ.
ಮುಂದಿನ 72 ಗಂಟೆಗಳವರೆಗೂ ರಾಜ್ಯದ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಡೆಹ್ರಾಡೂನ್‌ನ ಹವಾಮಾನ ಇಲಾಖೆ ನಿರ್ದೇಶಕ ವಿಕ್ರಂ ಸಿಂಗ್ ತಿಳಿಸಿದ್ದಾರೆ. ಉತ್ತರಾಖಂಡ ರಾಜ್ಯದ 2900 ಹೆಕ್ಟೇರ್ ಅರಣ್ಯಪ್ರದೇಶ ಈಗಾಗಲೇ ಅಗ್ನಿಯ ಕೆನ್ನಾಲಿಗೆಗೆ ತುತ್ತಾಗಿದೆ. ಗಢವಾಲ್ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು ಅಂದರೆ 1200 ಹೆಕ್ಟೇರ್, ಕುಮಾವು ಜಿಲ್ಲೆಯ 1100 ಹೆಕ್ಟೇರ್ ಅರಣ್ಯ ಸಂಪೂರ್ಣ ಭಸ್ಮವಾಗಿದೆ. ಬೆಂಕಿ ಇನ್ನೇನು ಜಿಮ್ ಕಾರ್ಬೆಟ್ ರಾಷ್ಟ್ರೀಯ ರಕ್ಷಿತಾರಣ್ಯಕ್ಕೂ ಹಬ್ಬುವ ಹಂತದಲ್ಲಿ ಮಳೆ ಸುರಿದಿದ್ದು ಅವಗಢಕ್ಕೆ ಪ್ರಕೃತಿಯೇ ಬ್ರೇಕ್ ಹಾಕಿದಂತಾಗಿದೆ.
ರಕ್ಷಿತಾರಣ್ಯದ ಪ್ರಾಣಿಗಳು ಮತ್ತು ಸಸ್ಯ ಸಂಪತ್ತು ರಕ್ಷಣೆಗೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನೂ ಕೈಗೊಂಡಿದ್ದೆವು. ವರುಣದೇವ ಕೃಪೆ ತೋರಿ ನಮ್ಮ ದುಗುಡವನ್ನು ದೂರ ಮಾಡಿದ್ದಾನೆ ಎಂದು ಕಾರ್ಬೆಟ್ ರಕ್ಷಿತಾರಣ್ಯದ ನಿರ್ದೇಶಕ ಸಮೀರ ಸಿನ್ಹಾ ನಿಟ್ಟುಸಿರು ಬಿಟ್ಟಿದ್ದಾರೆ. ಕಾಡ್ಗಿಚ್ಚು ಶಮನಕ್ಕೆ 11,600 ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದರು. ಮಳೆ ಸುರಿದ ಪರಿಣಾಮ ತುರ್ತು ಕಾರ್ಯಾಚರಣೆ ಸಿಬ್ಬಂದಿಗೆ ನೆಮ್ಮದಿ ದೊರೆತಂತಾಗಿದೆ.ಜೀವದ ಹಂಗು ತೊರೆದು ಕಾಡಿನ ಬೆಂಕಿ ಶಮನಕ್ಕೆ ಅಹರ್ನಿಷಿ ಯತ್ನ ಮಾಡುತ್ತಿದ್ದ ಸಿಬ್ಬಂದಿಗಳ ಪೈಕಿ ನಾಲ್ವರು ಮೃತಪಟ್ಟು, 14ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.