ಕರ್ನಾಟಕ

ಪ್ಲಾಸ್ಟಿಕ್ ನಿಷೇಧ ಜಾರಿ ಯಶಸ್ವಿಗೆ ಮನವಿ

Pinterest LinkedIn Tumblr

3a2ಬೆಂಗಳೂರು, ಮೇ ೩ – ನಗರದಲ್ಲಿ ಪ್ಲಾಸ್ಟಿಕ್‌ನ್ನು ಸಂಪೂರ್ಣವಾಗಿ ನಿಷೇಧಿಸಿದ್ದರೂ ಕಾನೂನು ಪರಿಣಾಮಕಾರಿಯಾಗಿ ಜಾರಿಗೊಳ್ಳಬೇಕಾದರೆ ವಿವಿಧ ಇಲಾಖೆಗಳ ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಅಭಿಪ್ರಾಯಪಟ್ಟರು.
ನಗರದ ಮಲ್ಲೇಶ್ವರಂನಲ್ಲಿರುವ ಐಪಿಪಿ ಕೇಂದ್ರದಲ್ಲಿ ಬಿಬಿಎಂಪಿ ಪರಿಸರ ಮಂಡಳಿ ಆರ್‌ಟಿಓ ಪೊಲೀಸ್ ಇಲಾಖೆ, ತೂಕ ಮತ್ತು ಅಳತೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಸರ್ಕಾರ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಯಾವ ಪ್ಲಾಸ್ಟಿಕ್‌ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅರಿವು ಇರುವುದು ಅಗತ್ಯ ಎಂದರು.
ವಿವಿಧ ಬಗೆಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿವೆ. ಆದರೆ, ಎಲ್ಲಾ ರೀತಿಯ ಪ್ಲಾಸ್ಟಿಕ್ ಉತ್ಪನ್ನಗಳ ಮೇಲೆ ದಂಡ ವಿಧಿಸಲು ಸಾಧ್ಯವಿಲ್ಲ. ಹಾಗಾಗಿ ಉಪಯೋಗಿಸುವ ಪ್ಲಾಸ್ಟಿಕ್ ಯಾವುದು ಹಾಗೂ ಬಳಕೆ ಮಾಡದಿರುವ ಪ್ಲಾಸ್ಟಿಕ್ ಎಂಬುದರ ಬಗ್ಗೆ ಇಲಾಖಾ ಅಧಿಕಾರಿಗಳಲ್ಲಿ ಅರಿವು ಇರಬೇಕು. ಇದಕ್ಕಾಗಿ ತರಬೇತಿ ಅಗತ್ಯವಿದೆ ಎಂದು ಅವರು ಹೇಳಿದರು.
ಪೂರ್ವಜರ ಕಾಲದಲ್ಲಿ ಪ್ಲಾಸ್ಟಿಕ್ ಉತ್ಪನ್ನ ಯಾವುದೂ ಇರಲಿಲ್ಲ. ಹಾಗಾಗಿ ಹೊಲ ಗದ್ದೆಗಳಲ್ಲಿ ಆರೋಗ್ಯಕರ ಗೊಬ್ಬರ ಲಭ್ಯವಾಗುತ್ತಿತ್ತು. ಆದರೆ, ಪ್ಲಾಸ್ಟಿಕ್ ಬಳಕೆಯಿಂದಾಗಿ ಇಂದು ಪರಿಸರ ಮಾಲಿನ್ಯವಾಗುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಪ್ಲಾಸ್ಟಿಕ್ ಬಳಕೆ ಮಾಡುವ ವಸ್ತುಗಳು ಯಾವುದು ಎಂಬ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಇರಬೇಕು. ಆಗ ಮಾತ್ರ ಇಂತಹ ಉತ್ಪನ್ನಗಳ ಮೇಲೆ ದಂಡ ವಿಧಿಸಲು ಸುಲಭವಾಗುತ್ತದೆ ಎಂದು ಅವರು ಹೇಳಿದರು.
ಮೇಯರ್ ಮಂಜುನಾಥರೆಡ್ಡಿ, ಉಪ ಮೇಯರ್ ಹೇಮಲತಾ, ಆಡಳಿತ ಪಕ್ಷದ ನಾಯಕ ಆರ್.ಎಸ್. ಸತ್ಯನಾರಾಯಣ ಹಾಗೂ ಪರಿಸರ ನಿರ್ಮೂಲನಾ ಮಂಡಳಿ ಅಧ್ಯಕ್ಷ ಲಕ್ಷ್ಮಣ ಹಾಗೂ ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment