
ಬೆಂಗಳೂರು:‘ಉಪ್ಪು ಹುಳಿ ಖಾರ’ ಚಿತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಇಮ್ರಾನ್ ಸರ್ದಾರಿಯಾ, ನಿರ್ಮಾಪಕ ಕೆ. ಮಂಜು ಮತ್ತು ನಟಿ ಮಾಲಾಶ್ರೀ ನಡುವಿನ ವಿವಾದ ಸುಖಾಂತ್ಯ ಕಂಡಿದೆ. ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರು ಮಾಲಾಶ್ರೀ ಸಮ್ಮುಖದಲ್ಲಿ ಅವರ ಕ್ಷಮೆ ಕೇಳುವ ಮೂಲಕ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.
ಪ್ರಕರಣಕ್ಕೆ ಮುಕ್ತಾಯ ಹೇಳಲು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸರ್ದಾರಿಯಾ, ‘ಮಾಲಾಶ್ರೀ ಅವರ ಮನಸ್ಸು ನೋಯಿಸುವ ಉದ್ದೇಶ ಇರಲಿಲ್ಲ. ಅವರು ಕಣ್ಣೀರು ಹಾಕಿದ್ದು ಬೇಸರ ತರಿಸಿದೆ. ಹಾಗಾಗಿ ಕ್ಷಮೆ ಕೇಳುತ್ತೇನೆ’ ಎಂದರು.
ಮಾಲಾಶ್ರೀ ಪ್ರತಿಕ್ರಿಯಿಸಿ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ದಾರಿಯಾ ನನ್ನಲ್ಲಿ ಕ್ಷಮೆ ಕೇಳಿದ್ದಾರೆ. ನಾನು ಕಠಿಣ ಹೃದಯಿ ಅಲ್ಲ. ನಾನು ಅಭಿನಯಿಸದಿದ್ದರೆ ಸಿನಿಮಾ ನಿಲ್ಲಿಸುವುದಾಗಿ ಚಿತ್ರತಂಡ ಹೇಳಿದೆ. ನನ್ನಿಂದಾಗಿ ನೂರಾರು ಜನರಿಗೆ ಕಷ್ಟವಾಗುವುದನ್ನು ನಾನು ಬಯಸುವುದಿಲ್ಲ. ಹಾಗಾಗಿ ಸಿನಿಮಾ ಮುಗಿಸಿಕೊಡುತ್ತೇನೆ’ ಎಂದರು.
‘ಚಿತ್ರದ ನಿರ್ಮಾಪಕರು ಬದಲಾಗಿದ್ದನ್ನು ಒತ್ತಡದ ಕಾರಣ ಮಾಲಾಶ್ರೀ ಅವರಿಗೆ ನಾನು ತಿಳಿಸದೇ ಇರಬಹುದು. ನಾನು ಅವರಿಗೆ ಈ ವಿಷಯವನ್ನು ತಿಳಿಸಬೇಕಿತ್ತು’ ಎಂದು ಕೆ. ಮಂಜು ಹೇಳಿದರು. ನಟ ದೊಡ್ಡಣ್ಣ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹಾಗೂ ಮಾಲಾಶ್ರೀ ಪತಿ ರಾಮು ಇದ್ದರು.