ನವದೆಹಲಿ, ಏ.25- ಭಾರತದಲ್ಲಿ ಇಸ್ಲಾಮಿಕ್ (ಐಎಸ್‌ಐಎಸ್) ಉಗ್ರ ಸಂಘಟನೆಗೆ ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಐಎಸ್ ಪ್ರಮುಖ ಭಯೋತ್ಪಾದಕ ಮೊಹ್ಮದ್ ಷರೀಫ್ ಅರ್ಮರ್ ಕೆಲವು ದಿನಗಳ ಹಿಂದೆ ಅಮೆರಿಕ ಪಡೆ ಸಿರಿಯಾದಲ್ಲಿ ನಡೆಸಿದ ಡ್ರೋಣ್ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವಾಷಿಂಗ್ಟನ್ ತಿಳಿಸಿದೆ. ಯೂಸೂಫ್ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿದ್ದ ಅರ್ಮರ್, ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ನಾಯಕ ಅಬುಬಕರ್ ಅಲ್ ಬಾಫ್‌ದಾದಿಯ ನಿಕಟವರ್ತಿಯಾಗಿದ್ದ.
ಕಳೆದ ಕೆಲವು ದಿನಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ 23 ಮಂದಿ ಐಎಸ್ ಉಗ್ರರನ್ನು ಬಂಧಿಸಿದ್ದು, ಇವರೆಲ್ಲ ಅರ್ಮರ್ ನಿರ್ದೇಶನದಂತೆ ಸಂಘಟನೆಗೆ ಭಾರತೀಯ ಯುವಕರನ್ನು ಸೇರ್ಪಡೆ ಮಾಡುತ್ತಿದ್ದರು. ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಜಮ್ಮು-ಕಾಶ್ಮೀರ ಹಾಗೂ ಮಧ್ಯ ಪ್ರದೇಶ ಪೊಲೀಸರು ಈ 23 ಜನರ ಬಂಧನ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿರಿಯಾಕ್ಕೆ ಇನ್ನಷ್ಟು ಸಿಬ್ಬಂದಿ: ಸಿರಿಯಾದಲ್ಲಿ ಉಗ್ರರ ವಿರುದ್ಧದ ಸಮರಕ್ಕೆ ಅಮೆರಿಕದಿಂದ ಇನ್ನಷ್ಟು ಮಿಲಿಟರಿ ಪಡೆಗಳನ್ನು ರವಾನಿಸುವುದಾಗಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.
800 ಅಲ್‌ಖೈದಾ ಬಲಿ: ಅರಬ್ ಮಿತ್ರಪಡೆ ಬೆಂಬಲಿತ ಯೆಮೆನ್ ಸೇನೆಯ ಕಾರ್ಯಾಚರಣೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 800 ಮಂದಿ ಅಲ್‌ಖೈದಾ ಉಗ್ರರು ಬಲಿಯಾಗಿದ್ದಾರೆ ಎಂದು ಅರಬ್ ಸೇನಾಮೂಲಗಳು ತಿಳಿಸಿವೆ. ಇದುವರೆಗಿನ ಸೆಣಸಾಟದ ನಂತರ ಸರ್ಕಾರಿ ಪಡೆಗಳು ಮುಕಲ್ಲಾ ನಗರ ಹಾಗೂ ಪ್ರಮುಖ ತೈಲಾಗಾರವೊಂದನ್ನು ಮರುವಶಪಡಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.