ನವದೆಹಲಿ(ಪಿಟಿಐ): ಚೀನಾ ಭಿನ್ನಮತೀಯ ನಾಯಕ ಡೋಲ್ಕನ್ ಇಸಾ ಅವರಿಗೆ ನೀಡಿದ್ದ ವೀಸಾವನ್ನು ಭಾರತ ರದ್ದು ಪಡಿಸಿದೆ. ಚೀನಾದ ಆಕ್ಷೇಪಕ್ಕೆ ಮಣಿದು ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಇಸಾ ಅವರು ಪಾಲ್ಗೊಳ್ಳಬೇಕಿತ್ತು.
‘ಡೋಲ್ಕನ್ ಇಸಾ ಅವರ ವೀಸಾವನ್ನು ನಾವು ರದ್ದುಪಡಿಸಿದ್ದೇವೆ’ ಎಂದು ಕೇಂದ್ರ ಗೃಹ ಸಚಿವಾಲಯದ ವಕ್ತಾರರೊಬ್ಬರು ಸೋಮವಾರ ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ವಿವರಣೆ ಅವರು ನೀಡಿಲ್ಲ.
ವಿಶ್ವ ವಿಗರ್ ಕಾಂಗ್ರೆಸ್(ಡಬ್ಲ್ಯುಯುಸಿ) ನಾಯಕರಾಗಿರುವ ಇಸಾ, ಸದ್ಯ ಜರ್ಮನಿಯಲ್ಲಿ ನೆಲೆಸಿದ್ದಾರೆ. ಅಮೆರಿಕ ಮೂಲಕ ‘ಇನಿಷಿಯೇಟೀವ್ಸ್ ಫಾರ್ ಚೀನಾ’ ಆಯೋಜಿಸಿರುವ ಸಮ್ಮೇಳನಕ್ಕೆ ಅವರನ್ನು ಆಹ್ವಾನಿಸಲಾಗಿತ್ತು.
ವೀಸಾ ರದ್ದತಿ ಸಂಬಂಧ ಪ್ರತಿಕ್ರಿಯಿಸಿರುವ ಇಸಾ, ‘ಏಪ್ರಿಲ್ 23ರಂದು ವೀಸಾ ರದ್ದುಗೊಂಡಿರುವ ಕುರಿತು ಭಾರತದಿಂದ ಮಾಹಿತಿ ಸಿಕ್ಕಿತು. ಅದರಲ್ಲಿ ಹೆಚ್ಚಿನ ವಿವರಣೆ ಇರಲಿಲ್ಲ’ ಎಂದಿದ್ದಾರೆ.
ಭಾರತದ ನಿರ್ಧಾರಕ್ಕೆ ಸ್ಪಷ್ಟ ಕಾರಣ ಗೊತ್ತಿಲ್ಲ. ‘ಭಾರತ ಸರ್ಕಾರದ ಮೇಲೆ ಚೀನಾ ಒತ್ತಡ ಹಾಕಿರಬಹುದು. ಆದರೆ, ಸ್ಪಷ್ಟ ಕಾರಣ ತಿಳಿದಿಲ್ಲ. ಭಾರತದ ಕಡೆಯಿಂದ ಯಾವುದೇ ವಿವರಣೆ ಸಿಕ್ಕಿಲ್ಲ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇಸಾ ಅವರನ್ನು ಚೀನಾ ಭಯೋತ್ಪಾದಕ ಎಂದೇ ಗುರುತಿಸುತ್ತದೆ. ಪಠಾಣ್ಕೋಟ್ ಉಗ್ರರ ದಾಳಿ ರೂವಾರಿ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯು ‘ಭಯೋತ್ಪಾದಕ’ ಎಂದು ಘೋಷಿಸಲು ಚೀನಾ ಅಡ್ಡಗಾಲು ಹಾಕಿದ್ದರಿಂದ ಇಸಾ ಅವರಿಗೆ ಪ್ರವಾಸಿ ವೀಸಾ ನೀಡಲು ಭಾರತ ಸರ್ಕಾರ ಕಳೆದವಾರ ನಿರ್ಧರಿಸಿತ್ತು.
ಒಮರ್ ವಾಗ್ದಾಳಿ: ಇಸಾ ಅವರಿಗೆ ಪ್ರಯಾಣ ವೀಸಾ ನೀಡಿ ಬಳಿಕ ಹಿಂಪಡೆದ ಕೇಂದ್ರ ಸರ್ಕಾರದ ನಡೆಯನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಟೀಕಿಸಿದ್ದಾರೆ.