ನವದೆಹಲಿ(ಪಿಟಿಐ): ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಕುರಿತು ಸೋಮವಾರ ಆರಂಭವಾದ ಸಂಸತ್ತಿನ ಉಭಯ ಸದನಗಳ ಕಲಾಪದಲ್ಲಿ ಗದ್ದಲ ಎಬ್ಬಿಸಿರುವ ಕಾಂಗ್ರೆಸ್, ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಮೋದಿ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿದೆ. ಈ ಆರೋಪವನ್ನು ಗೃಹ ಸಚಿವ ರಾಜನಾಥ್ ಸಿಂಗ್ ಅವರು ತಳ್ಳಿ ಹಾಕಿದ್ದಾರೆ.
ಒಂದು ತಿಂಗಳ ವಿರಾಮದ ಬಳಿಕ ಆರಂಭವಾದ ಕಲಾಪದಲ್ಲಿ ಈ ವಿಚಾರವಾಗಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಾವೇರಿದ ವಾತಾರವಣ ಸೃಷ್ಟಿಯಾಯಿತು. ಕಾಂಗ್ರೆಸ್ ಸದಸ್ಯರು, ಪಕ್ಷದ ಲೋಕಸಭೆ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.
‘ಇದು ಪ್ರಜಾಪ್ರಭುತ್ವದ ಕೊಲೆ’ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಆರೋಪಿಸಿದರು. ಕಾಂಗ್ರೆಸ್ಗೆ ಸಾಥ್ ನೀಡಿದ ಜೆಡಿಯು ಹಾಗೂ ಎಎಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರ ಶಾಸಕರ ಖರೀದಿಯಲ್ಲಿ ತೊಡಗಿದೆ. ಬಿಜೆಪಿ ಸರ್ಕಾರ ರಚನೆಗೆ ಶಾಸಕರ ಮೇಲೆ ಒತ್ತಡ ಹೇರುತ್ತಿದೆ. ಈ ಮೂಲಕ ಸಂವಿಧಾನದ ಕೊಲೆಯಾಗುತ್ತಿದೆ’ ಎಂದು ಖರ್ಗೆ ಆರೋಪಿಸಿದರು.