ಸಾಫ್ಟ್ವೇರ್ ಕ್ಷೇತ್ರದಿಂದ ಸಿನಿಲೋಕಕ್ಕೆ ಬರುವ ಮಂದಿಗೇನೂ ಕಮ್ಮಿಯಿಲ್ಲ. ಈಗಾಗಲೇ ಸಾಕಷ್ಟು ಮಂದಿ ಬಂದಿದ್ದಾರೆ. ಅಂತಹವರ ಸಾಲಿಗೆ ಈಗ ಹೊಸ ಸೇರ್ಪಡೆ ಮಧುಕರ್.
ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಕೆಲಸ ಮಾಡುತ್ತಿದ್ದ ಮಧುಕರ್ಗೆ ನಟನೆ ಮೇಲೆ ಆಸಕ್ತಿ ಜಾಸ್ತಿ. ಆ ಕಾರಣಕ್ಕೆ ಅವರು ರಂಗಭೂಮಿಯತ್ತ ಮುಖ ಮಾಡಿ “ಯುವರ್ ಟ್ರೂಲಿ ಥಿಯೇಟರ್’ ಎಂಬ ರಂಗ ತಂಡದಲ್ಲಿ ಸುಮಾರು 70 ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶನ ಮಾಡಿದ್ದಾರೆ. ನಾಲ್ಕು ವರ್ಷಗಳ ರಂಗಭೂಮಿ ನಂಟು ಇರುವ ಮಧುಕರ್ಗೆ ಮೊದಲು ಅವಕಾಶ ಸಿಕ್ಕಿದ್ದು, ಸಾಯಿ ನಿರ್ದೇಶನದ “ಕ’ ಚಿತ್ರದಲ್ಲಿ ಅಲ್ಲಿದ್ದ ಎಂಟು ಹೀರೋಗಳ ಪೈಕಿ ಮಧುಕರ್ ಕೂಡ ಒಬ್ಬರು. ಅಲ್ಲಿಂದ ನಿರ್ದೇಶನದತ್ತವೂ ವಾಲಿದರು. “ಮಿ.ಮಿ.ರಾಮಾಚಾರಿ’ ಸಿನಿಮಾ ಮೂಲಕ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲಿಂದ ಒಂದಷ್ಟು ಚಿತ್ರಗಳಿಗೆ ಚಿತ್ರಕಥೆ ಕೂಡಾ ಬರೆದಿದ್ದಾರೆ. ಈಗ “ಉರ್ವಿ’ ಎಂಬ ಚಿತ್ರದಲ್ಲಿ ಹೀರೋ ಆಗಿದ್ದಾರೆ. ಅಷ್ಟೇ ಅಲ್ಲ, ನಿರ್ದೇಶನ ವಿಭಾಗದಲ್ಲೂ ಕೆಲಸ ಮಾಡುತ್ತಿದ್ದಾರೆ. ಅಂದಹಾಗೆ, ಮಧುಕರ್ಗೆ “ಉರ್ವಿ’ ಚಿತ್ರದಲ್ಲಿ ಒಬ್ಬ ಆರ್ಟಿಸ್ಟ್ ಪಾತ್ರವಂತೆ. ಗೋಡೆಗಳ ಮೇಲೆಲ್ಲಾ ಭ್ರಷ್ಟ ರಾಜಕಾರಣಿಗಳ ಚಿತ್ರ ಬಿಡಿಸೋ ಪಾತ್ರವದು. ರಾತ್ರಿ ವೇಳೆ ಚಿತ್ರ ಬಿಡಿಸಿ, ಬೆಳಗ್ಗೆ ತಪ್ಪಿಸಿಕೊಂಡು ಹೋಗುವ ಪಾತ್ರವಂತೆ ಅದು.
ಅವರಿಗೆ ಆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಾಯಕಿಯಂತೆ. ಇನ್ನುಳಿದಂತೆ ಚಿತ್ರದಲ್ಲಿ ಶ್ವೇತಾಪಂಡಿತ್ ಮತ್ತು ಶ್ರುತಿ ಹರಿಹರನ್ ಇದ್ದಾರಂತೆ. ಇನ್ನು, ಈ ಚಿತ್ರಕ್ಕೆ ಪ್ರದೀಪ್ ವರ್ಮ ನಿರ್ದೇಶಕರು. ಸದ್ಯ ಮಧುಕರ್ಗೆ ಹೀರೋ ಆಗುವುದರ ಜತೆಯಲ್ಲಿ ಒಳ್ಳೆಯ ನಿರ್ದೇ ಶಕನಾಗುವ ಆಸೆಯೂ ಇದೆಯಂತೆ.
-ರವಿ ರೈ
-ಉದಯವಾಣಿ