
ಮೂಲ್ಕಿ, ಏ.16: ತೆಂಗಿನ ಮರವನ್ನೇರಿದ್ದ ವ್ಯಕ್ತಿಯೋರ್ವರು ಆಯತಪ್ಪಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕೆಮ್ರಾಲ್ -ಕಾಪಿಕಾಡ್ ಅತ್ತೂರಿನಲ್ಲಿ ಶುಕ್ರವಾರ ಸಂಭವಿಸಿದೆ. ಈ ಸಂದರ್ಭ ಅವರನ್ನು ರಕ್ಷಿಸಲೆಂದು ಬಾವಿಗಳಿದಿದ್ದ ಮೂವರು ಉಸಿರುಗಟ್ಟಿ ಅಸ್ವಸ್ಥರಾಗಿದ್ದಾರೆ.
ಮೃತವ್ಯಕ್ತಿಯನ್ನು ಕಾಪಿಕಾಡು ಅತ್ತೂರು ನಿವಾಸಿ ಪೂವಪ್ಪ ಎಂದು ಗುರುತಿಸಲಾಗಿದೆ. ಸ್ಥಳೀಯ ನಿವಾಸಿ ಮಹಮ್ಮದ್ ಕುಂಞ ಅವರ ಮನೆಯ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದ ಪೂವಪ್ಪ ಆಕಸ್ಮಿಕವಾಗಿ ಕಾಲು ಜಾರಿ ಕೆಳಗಿರುವ ಬಾವಿಗೆ ಬಿದ್ದಿದ್ದರು. ಅವರನ್ನು ರಕ್ಷಿಸಲೆಂದು ಬಾವಿಗಳಿದಿದ್ದ ಮಹಮ್ಮದ್ ಕುಂಞ ಅವರು ಉಸಿರುಗಟ್ಟಿ ಅಸ್ವಸ್ಥಗೊಂಡಾಗ ರಕ್ಷಣೆಗೆಂದು ಅವರ ಮಕ್ಕಳಾದ ಮುನೀರ್ ಮತ್ತು ಅಬ್ದುಲ್ ನಝೀರ್ ಕೂಡ ಕೆಳಕ್ಕಿಳಿದಿದ್ದರು. ಅವರಿಗೂ ಅಮ್ಲಜನಕದ ಕೊರತೆಯಿಂದಾಗಿ ಉಸಿರುಗಟ್ಟಿ ಮೇಲಕ್ಕೆ ಬರಲಾಗಿರಲಿಲ್ಲ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಸ್ಥಳೀಯರೊಂದಿಗೆ ಸೇರಿಕೊಂಡು ಬಾವಿಯೊಳಗಿದ್ದ ಎಲ್ಲ ನಾಲ್ವರನ್ನೂ ಮೇಲಕ್ಕೆತ್ತಿದರಾದರೂ ಆ ವೇಳೆಗಾಗಲೇ ಪೂವಪ್ಪ ಮೃತಪಟ್ಟಿದ್ದರು. ಅಸ್ವಸ್ಥಗೊಂಡಿದ್ದ ಇತರ ಮೂವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಈ ಬಗ್ಗೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.