
ಮಂಗಳೂರು, ಎ.05 : ಮಂಗಳೂರಿನ ಸಿಟಿಝನ್ಸ್ ಪೋರಂ ಫಾರ್ ಮಂಗಳೂರು ಡೆವಲಪ್ಮೆಂಟ್ ಸಮಿತಿಯ ವತಿಯಿಂದ ಸೋಮವಾರ ನಗರದ ಸಹೋದಯ ಸಭಾಂಗಣದಲ್ಲಿ ‘ಬೃಹತ್ ಯೋಜನೆಗಳು-ಭ್ರಷ್ಟಾಚಾರ ಮತ್ತು ನಿಜವಾದ ರಾಷ್ಟ್ರೀಯತೆ’ ಎಂಬ ವಿಷಯದಲ್ಲಿ ಸಂವಾದ ಗೋಷ್ಠಿ ನಡೆಯಿತು.
ಸಂವಾದ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಾಜ ಪರಿವರ್ತನಾ ಸಮುದಾಯ ಸಂಘಟನೆಯ ಹಿರಿಯ ನಿರ್ದೇಶಕ ಮತ್ತು ಸಾಮಾಜಿಕ ಕಾರ್ಯಕರ್ತ ಎಸ್.ಆರ್ . ಹಿರೇಮಠ್ ಅವರು, ದೇಶದಲ್ಲಿ ಭ್ರಷ್ಟಾಚಾರ, ಅಗಾಧವಾದ ಆರ್ಥಿಕ ಅಸಮಾನತೆ ಹಾಗೂ ಸಾಮಾಜಿಕ ಅಸಮಾನತೆಗೆ ಕಾರಣವಾಗಿರುವ ಘಟನೆಗಳು ನಮ್ಮ ಮುಂದಿರುವಾಗ ಪ್ರಜಾಪ್ರಭುತ್ವ ಕವಲು ಹಾದಿಯಲ್ಲಿದೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೇಳಿದಂತೆ ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಸಮಾನತೆ ಸಾಧಿಸದ್ದಿರೆ ರಾಜಕೀಯ ಸ್ವಾತಂತ್ರ ದುರ್ಬಲಗೊಳ್ಳುತ್ತದೆ ಎಂದು ಹೇಳಿದರು.

ದೇಶದಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಹಮ್ಮಿಕೊಂಡ ಬೃಹತ್ ಯೋಜನೆಗಳಲ್ಲಿ ಮನೆ-ಸೂರು ಕಳೆದುಕೊಂಡವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಳು ಕುಂಟುತ್ತಾ ಸಾಗಿವೆ. ಹಲವು ದಶಕಗಳ ನಿರ್ಮಾಣಗೊಂಡ ಬಾಕ್ರಾನಂಗಲ್ ಅಣೆಕಟ್ಟು ಯೋಜನೆಯ ಸಂತ್ರಸ್ತರು ಇಂದಿಗೂ ಸೂಕ್ತ ಪರಿಹಾರ ದೊರೆಯದೆ ಇರುವುದು ಒಂದು ಉದಾಹರಣೆ ಎಂದು ಹಿರೇಮಠ್ ಹೇಳಿದರು.
ಹಣ ಬಲ ಮತ್ತು ರಾಜಕೀಯ ಶಕ್ತಿಗಳು ಜೊತೆಯಾಗಿ ಸೇರಿರುವುದು ಭ್ರಷ್ಟಾಚಾರ ಬೆಳೆಯಲು ಕಾರಣವಾಗಿದೆ. ಪ್ರತಿ ಬಜೆಟ್ನಲ್ಲಿಯೂ ಬೃಹತ್ ಕಾರ್ಪೊರೇಟ್ ಶಕ್ತಿಗಳು ಕೋಟ್ಯಾಂತರ ರೂ. ಸಬ್ಸಿಡಿ ಪಡೆಯುತ್ತಾರೆ. ಇಂತಹ ಸಂದರ್ಭ ಜನರು ತಮ್ಮ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಾಗಿದೆ ಎಂದು ಹೇಳಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಕಾಲದಲ್ಲಿ ಸಂವಿಧಾನದತ್ತವಾದ ಪ್ರಜೆಗಳ ಹಕ್ಕುಗಳನ್ನು ಅಮಾನತುಗೊಳಿಸಿ ಅಧಿಕಾರ ದುರುಪಯೋಗ ನಡೆಯಿತು. ಈ ರೀತಿ ಮತ್ತೊಮ್ಮೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯದಂತೆ ಜನರು ಜಾಗೃತರಾಗಿರಬೇಕು ಎಂದು ಹಿರೇಮಠ್ ಕರೆ ನೀಡಿದರು.
ಸಿಟಿಝನ್ಸ್ ಪೋರಂ ಫಾರ್ ಮಂಗಳೂರು ಡೆವಲಪ್ಮೆಂಟ್ ಸಮಿತಿಯ ಆನಂದ್, ನಟೇಶ್ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಭಟ್ ಸ್ವಾಗತಿಸಿದರು. ವಿದ್ಯಾದಿನಕರ್ ವಂದಿಸಿದರು.