
ಮುಂಬೈ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಗುರುವಾರ ಟಿ20 ವಿಶ್ವಕಪ್‍ನ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ವಾಂಖೆಡೆ ಕ್ರೀಡಾಂಗಣದಲ್ಲಿ ರನ್ ಹೊಳೆಯೇ ಹರಿಯುವ ಸಾಧ್ಯತೆಯಿದೆ.
ಭಾರತ ತಂಡದ ಬೌಲರ್‍ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಶಿಖರ್ ಧವನ್, ರೋಹಿತ್ ಶರ್ಮಾ, ಸುರೇಶ್ ರೈನಾರಿಂದ ಉತ್ತಮ ಆಟ ಕಂಡು ಬಂದಿಲ್ಲ. ಹೀಗಾಗಿ ಇಲ್ಲಿಯ ಪಿಚ್ ಬ್ಯಾಟ್ಸ್‍ಮನ್‍ಗಳಿಗೆ ಹೇಳಿಮಾಡಿಸಿದಂತಿರುವುದರಿಂದ ಈ ಬಾರಿ ಕ್ಲಿಕ್ ಆಗುವ ಸಾಧ್ಯತೆಯಿದೆ.
ಪಿಚ್ ನಿರ್ಮಾಣದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, ಟೀಂ ಇಂಡಿಯಾದ ಮ್ಯಾನೇಜ್‍ಮೆಂಟ್‍ನಿಂದ ಇದೇ ರೀತಿಯ ಪಿಚ್ ತಯಾರಿಸುವಂತೆ ಯಾವುದೇ ಮನವಿ ಬಂದಿಲ್ಲ. ಟಿ20 ಪಂದ್ಯಕ್ಕೆ ಅನುಗುಣವಾಗಿರುವಂತೆ ಪಿಚ್ ತಯಾರಿಸಿದ್ದೇವೆ. ಕ್ರೀಡಾಂಗಣ ಚಿಕ್ಕದಾಗಿದ್ದು, 71 ಯಾರ್ಡ್(64 ಮೀಟರ್) ದೂರವಿದೆ. ಆದರೆ ಮೊಹಾಲಿ ಮತ್ತು ಕೋಲ್ಕತ್ತಾ ಕ್ರೀಡಾಂಗಣಗಳ ಬೌಂಡರಿ ಲೈನ್‍ಗಳು 80 ಮೀಟರ್ ದೂರ ಇರುವುದರಿಂದ ಇಲ್ಲಿ ಹೆಚ್ಚು ಸಿಕ್ಸರ್ ಮತ್ತು ಬೌಂಡರಿಗಳು ಸಿಡಿಯಲಿದೆ ಎಂದು ಹೇಳಿದ್ದಾರೆ.
ಮೂರು ಪಂದ್ಯದಲ್ಲೂ ಭರ್ಜರಿ ರನ್:
ಟಿ20 ವಿಶ್ವಕಪ್‍ನಲ್ಲಿ ಈ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳು ನಡೆದಿದ್ದು ಮೂರರಲ್ಲೂ ಬ್ಯಾಟ್ಸ್ ಮನ್‍ಗಳು ವಿಜೃಂಭಿಸಿದ್ದಾರೆ.
ದಕ್ಷಿಣ ಆಫ್ರಿಕಾ ಇಂಗ್ಲೆಂಡ್ ಪಂದ್ಯದಲ್ಲಿ 2 ತಂಡಗಳ ಮೊತ್ತ 200 ಗಡಿ ದಾಟಿತ್ತು. ದಕ್ಷಿಣ ಆಫ್ರಿಕಾ 4 ವಿಕೆಟ್‍ಗೆ 229 ರನ್ ಗಳಿಸಿದರೆ ಇಂಗ್ಲೆಂಡ್ 8 ವಿಕೆಟ್ ನಷ್ಟಕ್ಕೆ 230 ರನ್‍ಗಳಿಸಿ ಪಂದ್ಯವನ್ನು ಗೆದ್ದುಕೊಂಡಿತ್ತು. ಇಂಗ್ಲೆಂಡಿನ ರೂಟ್ 44 ಎಸೆತದಲ್ಲೇ 83 ರನ್ ಸಿಡಿಸಿದ್ದರು.
ಎರಡನೇ ಪಂದ್ಯದಲ್ಲೆ ಇಂಗ್ಲೆಂಡ್ 6 ವಿಕೆಟ್ ನಷ್ಟಕ್ಕೆ 182 ರನ್‍ಗಳಿಸಿದರೆ, ವೆಸ್ಟ್‍ಇಂಡೀಸ್ 18.1 ಓವರ್‍ನಲ್ಲೇ 4 ವಿಕೆಟ್ ನಷ್ಟಕ್ಕೆ 183 ರನ್‍ಗಳಿಸಿತ್ತು. ಕ್ರಿಸ್ ಗೇಯ್ಲ್ 48 ಎಸೆತದಲ್ಲಿ ಔಟಾಗದೇ 100 ರನ್ ಗಳಿಸಿದ್ದರು. ಈ ಅಮೋಘ ಇನ್ನಿಂಗ್ಸ್‍ನಲ್ಲಿ 11 ಸಿಕ್ಸರ್, 5 ಬೌಂಡರಿ ಹೊಡೆದಿದ್ದರು.
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್ ನಷ್ಟಕ್ಕೆ 205 ರನ್‍ಗಳಿಸಿತ್ತು. ಅಫ್ಘಾನಿಸ್ತಾನ 172 ರನ್‍ಗಳಿಸಿತ್ತು. ಎಬಿಡಿ ವಿಲಿಯರ್ಸ್ 29 ಎಸೆತದಲ್ಲಿ 64 ರನ್‍ಗಳಿಸಿದ್ದರು.