ಮನೋರಂಜನೆ

ಟೈಸನ್‌ ಈಸ್‌ ವಿನ್ನರ್‌ ಗಳಿಕೆ ಮಾತಲ್ಲೇ ಉಳಿಕೆ

Pinterest LinkedIn Tumblr

Tyson-(1)ಸಾಮಾನ್ಯವಾಗಿ ಸಿನಿಮಾ ಸಕ್ಸಸ್‌ಮೀಟ್‌ಗಳು ವಾರಕ್ಕೊಂದು ನಡೀತಾನೇ ಇರುತ್ತವೆ. ಹಾಗೇ, ಇತ್ತೀಚೆಗೆ “ಟೈಸನ್‌’ ಕೂಡ ಸಕ್ಸಸ್‌ ಮೀಟ್‌ ಆಚರಿಸಿಕೊಂಡಿತು. ಅಂದು ಪತ್ರಕರ್ತರ ಮುಂದೆ ಕುಳಿತಿದ್ದ “ಟೈಸನ್‌’ ತಂಡದವರೆಲ್ಲರೂ ಸಿನ್ಮಾ ಸಕ್ಸಸ್‌ ಆಗಿದೆ ಅಂತಾನೇ ಹೇಳಿಕೊಂಡರು. ಆದರೆ, ಸಿನಿಮಾ ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆಗೆ ಮಾತ್ರ ಯಾರಲ್ಲೂ ಉತ್ತರವಿರಲಿಲ್ಲ. ಆದರೂ, ಚಿತ್ರಕ್ಕೆ ದಿನದಿಂದ ದಿನಕ್ಕೆ ಒಳ್ಳೇ ಕಲೆಕ್ಷನ್‌ ಬರುತ್ತಿದೆ. ಚಿತ್ರಮಂದಿರಗಳ ಸಂಖ್ಯೆ ಕೂಡ ಹೆಚ್ಚುತ್ತಿದೆ. ಆದರೆ, ಗಳಿಕೆ ಎಷ್ಟು ಎಂಬುದನ್ನು ಮಾತ್ರ ನೀವು ಕೇಳಂಗಿಲ್ಲ, ನಾವು ಹೇಳಂಗಿಲ್ಲ ಅಂತ ಅಲ್ಲಿದ್ದವರೆಲ್ಲರೂ ಹೇಳುತ್ತಾ ಹೋದರು.

ನಿರ್ದೇಶಕ ರಾಮ್‌ನಾರಾಯಣ್‌, ಕೆರಿಯರ್‌ನಲ್ಲಿ ಅದು ಅಪರೂಪದ ಪತ್ರಿಕಾಗೋಷ್ಠಿಯಂತೆ. “ಪೈಪೋಟಿ’ ಫ್ಲಾಪ್‌ ಆದಾಗ, ಮುಂದೆ ಎಂಥಾ ಸಿನ್ಮಾ ಮಾಡಬೇಕು ಎಂಬ ಗೊಂದಲವಿತ್ತಂತೆ. ಕೊನೆಗೆ ಒಳ್ಳೇ ಕಥೆ ಹೆಣೆದು, ಟೀಮ್‌ನ ಸಹಕಾರ ಪಡೆದು “ಟೈಸನ್‌’ ಮಾಡಿದರಂತೆ. “ಈ ಚಿತ್ರದ ಸಕ್ಸಸ್‌ ಹಿಂದೆ ಕಷ್ಟವಿತ್ತು, ನೋವಿತ್ತು. ಎಲ್ಲರ ಶ್ರಮಕ್ಕೆ ತಕ್ಕ ಫ‌ಲ ಸಿಕ್ಕಿದೆ’ ಈ ಸಕ್ಸಸ್‌ಗೆ ಕಾರಣರಾದ ಎಲ್ಲರಿಗೂ ಧನ್ಯವಾದ ಅಂದರು ಅವರು.

ಹೀರೋ ವಿನೋದ್‌ ಪ್ರಭಾಕರ್‌ ಮೊಗದಲ್ಲಿ ಸಂತಸದ ಅಲೆ ತೇಲಾಡುತ್ತಿತ್ತು. ಕಾರಣ, ಎಷ್ಟೋ ವರ್ಷಗಳ ಬಳಿಕ ಗೆಲುವು ಸಿಕ್ಕಿದ್ದು. ಎಲ್ಲೆಡೆ ಸಿನ್ಮಾ ಚೆನ್ನಾಗಿ ಪ್ರದರ್ಶನವಾಗುತ್ತಿದೆ. ಈ ಗೆಲುವಿಗೆ ಕಾರಣರಾದವರಿಗೆ ಥ್ಯಾಂಕ್ಸ್‌, ನನಗೆ ಇಂಥಾ ಅವಕಾಶ ಕೊಟ್ಟ ನಿರ್ಮಾಪಕರನ್ನು ಮರೆಯೋದಿಲ್ಲ. ಈ ಗೆಲುವಿನ ಸಿನಿಮಾ ಕೊಟ್ಟ ನಿರ್ಮಾಪಕರಿಗೆ ಮತ್ತೂಂದು ಸಿನ್ಮಾ ಮಾಡಿಕೊಡ್ತೀನಿ. ಆ ಸಿನಿಮಾಗೆ ನನ್ನ ಸಂಭಾವನೆ ಕೇವಲ ಒಂದು ರೂಪಾಯಿ ಆಗಿರುತ್ತೆ. ಇದೇ ಟೀಮ್‌ ಆ ಚಿತ್ರದಲ್ಲೂ ಕೆಲಸ ಮಾಡುತ್ತೆ ಅಂತ ಘೋಷಿಸಿದರು ವಿನೋದ್‌.

ಅಂದು ವಿತರಕ ಮುನಿರಾಜು, ಚಿತ್ರ ಸಕ್ಸಸ್‌ ಆಗಿದೆ ಆದರೆ, ಎಷ್ಟು ಕಲೆಕ್ಷನ್‌ ಆಗಿದೆ ಅಂತ ಈಗಲೇ ಹೇಳ್ಳೋದಿಲ್ಲ. ಚಿತ್ರದಿಂದ ಬೇರೆ ಯಾರಿಗೂ ನಷ್ಟ ಆಗಿಲ್ಲ ಅನ್ನೋದನ್ನ ಹೇಳಬಲ್ಲೆ. ಇನ್ನೂ ಲೆಕ್ಕ ಮಾಡಿಲ್ಲ. ಲೆಕ್ಕ ಮಾಡಿದ ಮೇಲಷ್ಟೇ ಚಿತ್ರದ ಗಳಿಕೆ ಎಷ್ಟಾಗಿದೆ ಅನ್ನೋದು ಗೊತ್ತಾಗುತ್ತೆ ಅಂದರು ಮುನಿರಾಜು. ನಿರ್ಮಾಪಕ ಬಾಬುರೆಡ್ಡಿ ಹ್ಯಾಪಿಯಾಗಿದ್ದಾರಂತೆ. ಮೊದಲ ಚಿತ್ರ ಗೆದ್ದಿದೆ. ಒಳ್ಳೇ ಮೊತ್ತಕ್ಕೆ ಸ್ಯಾಟಲೈಟ್‌ ಕೂಡ ಆಗಿದೆ. ಇದಕ್ಕಿಂತ ಖುಷಿ ಬೇರೇನಿಲ್ಲ ಅಂದರು. ಅಂದು ಆನಂದಪ್ರಿಯ, ಸತೀಶ್‌ಚಂದ್ರ ಶೆಟ್ಟಿ, ಅರಸು ಚಿತ್ರದ ಯಶಸ್ಸಿನ ಕುರಿತು ಮಾತಾಡಿದರು.
-ಉದಯವಾಣಿ

Write A Comment