ಕರ್ನಾಟಕ

ಚಿನ್ನಸ್ವಾಮಿ ಅಂಗಳದಲ್ಲಿ ಇಂದು ಇಂಡೋ – ಬಾಂಗ್ಲಾ ವಾರ್

Pinterest LinkedIn Tumblr

ind

ಬೆಂಗಳೂರು, ಮಾ.23: ಪುಟಿದೇಳುವ ಲಕ್ಷಣಗಳನ್ನು ತೋರಿರುವ ಭಾರತ ತಂಡ ಇಂದು ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಾಂಗ್ಲಾ ದೇಶವನ್ನು ಬಗ್ಗುಬಡಿಯಲಿದೆ. ಈಗಾಗಲೇ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿ ಹೊಸ ಆತ್ಮವಿಶ್ವಾಸದಲ್ಲಿರುವ ಧೋನಿಪಡೆಗೆ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಈ ರೀತಿಯ ನಿರೀಕ್ಷೆ ಹೊಂದಿದ್ದಾರೆ. ಯಾವುದೇ ತಂಡವನ್ನಾದರೂ ಮಣಿಸುವ ಚಾಕಚಕ್ಯತೆ ಹೊಂದಿರುವ ಮುರ್ತೋಜಾ ಸಾರಥ್ಯದ ಬಾಂಗ್ಲಾದ ಯುವ ಪಡೆ ಪಂದ್ಯಾವಳಿಯಲ್ಲಿ ಹೊಸ ಖದರ್ ತೋರಿದ್ದಾರೆ.

ಅಂಕಿಅಂಶಗಳನ್ನು ಗಮನಿಸಿದರೆ ಭಾರತ ಹಲವು ಬಾರಿ ಬಾಂಗ್ಲಾ ದೇಶಕ್ಕೆ ಸೋಲಿನ ರುಚಿಯನ್ನು ತೋರಿಸಿದೆ. ಆದರೆ ಪ್ರಬಲ ಬ್ಯಾಟಿಂಗ್ ಪಡೆ ಎಂದು ಹೇಳಲಾಗುತ್ತಿದ್ದರೂ ಟಿ-20 ವಿಶ್ವಕಪ್ನಲ್ಲಿ ಯಾಕೋ ಅದು ಅಲುಗಾಡುತ್ತಿದೆ. ಆರಂಭಿಕ ಜೋಡಿ ರನ್ ಗಳಿಸಲು ಪದೇ ಪದೇ ವಿಫಲವಾಗುತ್ತಿದ್ದು, ಧೋನಿಗೆ ಇದು ಚಿಂತೆಯಾಗಿದೆ. ಉತ್ತಮ ಲಯದಲ್ಲಿರುವ ವಿರಾಟ್ ಕೊಹ್ಲಿ ಸಂದಿಗ್ಧ ಪರಿಸ್ಥಿತಿಯಲ್ಲಿ ತಂಡಕ್ಕೆ ನೆರವಾಗಿ ಹಲವು ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ.

ಮಧ್ಯಮ ಕ್ರಮಾಂಕದಲ್ಲೂ ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ಕಂಡು ಬರುತ್ತಿಲ್ಲ. ಆದ್ದರಿಂದ ಇಂದಿನ ಪಂದ್ಯದಲ್ಲಿ ಕೆಲವೊಂದು ಬದಲಾವಣೆ ನಿರೀಕ್ಷಿಸಲಾಗಿದ್ದು, ಸುರೇಶ್ ರೈನಾ ಬದಲಾಗಿ ಅಜಿಂಕ್ಯಾ ರಹಾನೆ ಇಂದು ಆಡುವ ಸಾಧ್ಯತೆ ಇದೆ. ಬೆಂಗಳೂರಿನ ಪಿಚ್ ಬ್ಯಾಟ್ಸ್ಮೆನ್ಗಳಿಗೆ ಸ್ವರ್ಗ. ಅದರಂತೆ ರನ್ಗಳ ಹೊಳೆಯೇ ಹರಿಯುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ನಡೆದ ಎಲ್ಲಾ ಪಂದ್ಯಗಳಲ್ಲೂ ಇದು ಸಾಬೀತಾಗಿತ್ತು. ಕಳೆದ ಎರಡು ದಿನಗಳ ಹಿಂದೆಯೂ ಕೂಡ ಇಲ್ಲಿ ನಡೆದ ಪಂದ್ಯದಲ್ಲಿ ಶ್ರೀಲಂಕಾ-ವೆಸ್ಟ್ ಇಂಡೀಸ್ ನಡುವಿನ ಪಂದ್ಯದಲ್ಲಿ ಚಾಲ್ಸ್ ಆರ್ಭಟ ಮತ್ತು ಆಸ್ಟ್ರೇಲಿಯಾ -ಬಾಂಗ್ಲಾದೇಶ್ ನಡುವಿನ ಪಂದ್ಯದಲ್ಲಿ ಕವೇಜಾ ಅರ್ಧಶತಕ ಸಿಡಿಸಿದ್ದರು.

ಬೌಂಡರಿ ಗೆರೆಗಳು ಕೂಡ ಹತ್ತಿರದಲ್ಲಿರುವುದರಿಂದ ಬ್ಯಾಟ್ಸ್ಮೆನ್ಗಳು ಬೌಂಡರಿ ಗಿಟ್ಟಿಸುವುದು ಸುಲಭ. ಆದರೆ ಸ್ಪಿನ್ನರ್ಗಳಿಗೂ ಕೂಡ ಇದು ಹಲವು ಬಾರಿ ನೆರವಾಗುತ್ತದೆ. ಟಾಸ್ಕ್ ಗೆದ್ದ ತಂಡ ಯಾವುದೇ ಮುಲಾಜಿಲ್ಲದೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ರನ್ ಹೊಳೆ ಹರಿಸಲು ಇಷ್ಟಪಡುತ್ತದೆ. ಅದರಂತೆ ಇಂದು ಟಾಸ್ಕ್ ಕೂಡ ನಿರ್ಣಾಯಕವಾಗಲಿದೆ. ನಾಕೌಟ್ ಪಂದ್ಯವೆಂದೇ ಬಿಂಬಿತವಾಗಿದ್ದು, ಇದರಲ್ಲಿ ಭಾರತ ಗೆಲುವು ಸಾಧಿಸಿದರೆ ಸೆಮಿಫೈನಲ್ ತಲುಪುವ ಆಸೆ ಜೀವಂತವಾಗಿರುತ್ತದೆ. ಅದೇ ರೀತಿ ಬಾಂಗ್ಲಾ ದೇಶ ಸೋತರೆ ಟೂರ್ನಿಯಿಂದಲೇ ಹೊರಬಿದ್ದಂತೆ.

ಅಭಿಮಾನಿಗಳ ದಂಡು:

ಸುಮಾರು 32 ಸಾವಿರ ಪ್ರೇಕ್ಷಕರು ಕುಳಿತು ವೀಕ್ಷಿಸಬಹುದಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈಗಾಗಲೇ ಟಿಕೆಟ್ಗಳು ಸೋಲ್ಡ್ ಔಟ್ ಆಗಿದ್ದು, ಮಧ್ಯಾಹ್ನ 12 ರಿಂದಲೇ ಅಭಿಮಾನಿಗಳು ಜಮಾಯಿಸಿದ್ದ ತೊಡಗಿದ್ದಾರೆ. ಎಲ್ಲೆಡೆ ವಿಶೇಷ ಭದ್ರತೆ ಒದಗಿಸಲಾಗಿದ್ದು, ಧ್ವಜವನ್ನು ಬಿಟ್ಟು ಬೇರಾವುದೇ ವಸ್ತುಗಳನ್ನು ಒಳಗೆ ತೆಗೆದುಕೊಂಡು ಹೋಗಲು ನಿರ್ಬಂಧಿಸಲಾಗಿದೆ.

Write A Comment