ತಿರುವನಂತಪುರಂ, ಮಾ.22- ಬೇಸಿಗೆಯ ಆರಂಭದಲ್ಲೇ ದೇವರ ನಾಡು ಕೇರಳದಲ್ಲಿ ಬಿಸಿಲಿನ ತಾಪಮಾನ ದಾಖಲೆ ಏರಿಕೆಯಾಗಿದ್ದು, ಇದೇ ವೇಳೆ ಕುಡಿಯುವ ನೀರಿನ ಅಭಾವವೂ ತಾರಕಕ್ಕೇರಿದೆ. ಅನೇಕ ಜಿಲ್ಲೆಗಳಲ್ಲಿ ಈಗಾಗಲೇ ಪ್ರತಿ 12 ದಿನಕ್ಕೊಮ್ಮೆ ಕುಡಿಯುವ ನೀರನ್ನು ಕೊಡಲಾಗುತ್ತಿದೆ. ಕಳೆದ ತಿಂಗಳು ರಾಜಧಾನಿಯ ಸುತ್ತಮುತ್ತಲಿನ ಪ್ರದೇಶಗಳಲ್ಲೇ ವಾರಕ್ಕೆರಡು ದಿನ ನೀರು ಕೊಡಲಾಗುತ್ತಿತ್ತು. ಕುಡಿಯುವ ನೀರಿನ ಅಭಾವದ ಹಿನ್ನೆಲೆಯಲ್ಲಿ ಊಮನ್ ಚಾಂಡಿ ಸರ್ಕಾರ ಹೆಲ್ಪ್‌ಲೈನ್ ಸ್ಥಾಪಿಸಿತ್ತು. ಆದರೆ, ಅದರಿಂದ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂಬುದು ಜನರ ಅಹವಾಲು.
ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಈ ರೀತಿ ನೀರಿನ ಬರ ತಲೆದೋರಿರುವುದು ಆಡಳಿತಾರೂಢ ಸರ್ಕಾರಕ್ಕೆ ತೀವ್ರ ಸಂಕಷ್ಟ ಉಂಟುಮಾಡಿದೆ. ನಾವು ವಿವಿಧೆಡೆ ಕುಡಿಯುವ ನೀರನ್ನು ಟ್ಯಾಂಕರ್‌ಗಳ ಮೂಲಕ ಒದಗಿಸಲು ವ್ಯವಸ್ಥೆ ಮಾಡಿದ್ದೆವು. ಆದರೆ, ಚುನಾವಣಾಧಿಕಾರಿಗಳು ಅದಕ್ಕೆ ತಡೆಯೊಡ್ಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜನ ನೀರಿಲ್ಲದೆ ಸಾಯುತ್ತಿರುವಾಗ ಚುನಾವಣಾ ಆಯೋಗ ನೀರೊದಗಿಸಲು ತಡೆ ಒಡ್ಡಿರುವುದನ್ನು ಕಾನೂನು ಮೂಲಕ ಪ್ರಶ್ನಿಸಲಿದ್ದೇವೆ. ಜನರಿಗೆ ನೀರು ಕೊಡುವುದು ಸರ್ಕಾರದ ಕರ್ತವ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.