ಹೈದ್ರಾಬಾದ್,ಮಾ.20-ಭಾರತ್ ಮಾತಾಕಿ ಜೈ ಘೋಷಣೆ ಕುರಿತಂತೆ ದೇಶದೆಲ್ಲೆಡೆ ಪರ , ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಹೈದರಾಬಾದ್ನಲ್ಲಿ ಈ ಘೋಷಣೆ ಕೂಗಬಾರದೆಂದು ಫತ್ವಾ ಹೊರಡಿಸಲಾಗಿದೆ. ಇಲ್ಲಿನ ಜಾಮೀಯ ನಿಜಾಮೀಯ ಮಸೀದಿ ಭಾರತ್ ಮಾತಾಕಿ ಜೈ ಘೋಷಣೆ ಕೂಗದಂತೆ ಫತ್ವಾ ಹೊರಡಿಸುವ ಮೂಲಕ ವಿವಾದಕ್ಕೆ ಬೆಂಕಿ ಸುರಿದಿದೆ.
ಭಾರತ ಮಾತೆ ಅಥವಾ ರಾಷ್ಟ್ರ ಪ್ರೇಮ ಎಂಬುವುದು ಅವರವರ ನಂಬಿಕೆಗೆ ಬಿಟ್ಟ ವಿಷಯ. ಯಾರೊಬ್ಬರು ಬಲವಂತವಾಗಿ ಇದನ್ನು ಹೇಳಬಾರದೆಂದು ಮಸೀದಿಯ ಮುಖಂಡರೊಬ್ಬರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸಂಸದ ಅಕ್ಬರ್ವುದ್ದೀನ್ ಓವೈಸಿ ನನ್ನ ಕತ್ತಿಗೆ ಬಂದೂಕು ಇಟ್ಟರೂ ನಾನು ಮಾತ್ರ ಭಾರತ್ ಮಾತಾಕಿ ಜೈ ಎಂದು ಕೂಗುವುದಿಲ್ಲ ಎಂದು ಹೇಳಿದ್ದು ಭಾರೀ ವಿವಾದ ಸೂಚಿಸಿತ್ತು. ಓವೈಸಿ ಹೇಳಿಕೆಗೆ ಭಾರತದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಕೆಲವರು ಆತನ ಪೌರತ್ವ ಹಾಗೂ ಮತದಾನದ ಹಕ್ಕನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದರು. ಸಂಸತ್ನಲ್ಲಿ ಇದು ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿತ್ತು. ಇದೀಗ ಭಾರತ್ ಮಾತಾಕಿ ಜೈ ಘೋಷಣೆ ವಿರುದ್ಧ ಫತ್ವಾ ಹೊರಡಿಸಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ.