ರಾಷ್ಟ್ರೀಯ

ಕನ್ಹಯ್ಯ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳ ಉಚ್ಛಾಟನೆಗೆ ಜೆಎನ್ ಯು ನಿರ್ಧಾರ .!

Pinterest LinkedIn Tumblr

kanyyaನವದೆಹಲಿ, ಮಾ.15- ದೇಶ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ದೆಹಲಿ ನೆಹರು ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್ ಸೇರಿದಂತೆ ನಾಲ್ವರು ವಿದ್ಯಾರ್ಥಿಗಳನ್ನು ಉಚ್ಛಾಟನೆ ಮಾಡುವಂತೆ ಉನ್ನತ ಸಮಿತಿ ಶಿಫಾರಸು ಮಾಡಿದೆ. ವಿವಿ ಉಪಕುಲಪತಿ ಎಂ.ಜಗದೀಶ್‌ಕುಮಾರ್, ಮುಖ್ಯ ಶಿಸ್ತುಪಾಲನಾ ಅಧಿಕಾರಿ ಡಾ.ಎ.ದಿಮ್ರೀ ನೇತೃತ್ವದಲ್ಲಿ ಉನ್ನತ ಸಮಿತಿಯನ್ನು ರಚನೆ ಮಾಡಲಾಗಿತ್ತು. ಈ ಸಮಿತಿ ನೀಡಿರುವ ವರದಿಯಲ್ಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಕುಮಾರ್, ಉಮರ್‌ಖಾಲೀದ್, ಅನಿಬನ್‌ಭಟ್ಟಾಚಾರ್ಯ ಸೇರಿದಂತೆ ಇತರೆ ಇಬ್ಬರು ವಿದ್ಯಾರ್ಥಿಗಳನ್ನು ವಿವಿಯಿಂದ ಹೊರ ಹಾಕುವಂತೆ ಸಲಹೆ ಮಾಡಲಾಗಿದೆ.

ಭದ್ರತಾ ದೃಷ್ಟಿ ಮತ್ತು ಭವಿಷ್ಯದ ಹಿತದೃಷ್ಟಿಯಿಂದ ಈ ವಿದ್ಯಾರ್ಥಿಗಳನ್ನು ವಿವಿಯಿಂದಲೇ ಹೊರ ಹಾಕುವುದು ಒಳ್ಳೆಯ ಬೆಳವಣಿಗೆ. ಮುಂದೆ ಇಂತಹ ಘಟನೆಗಳು ನಡೆಯಬಾರದೆಂದರೆ ಇವರಿಗೆ ಈ ಶಿಕ್ಷೆಯೇ ಸರಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.ವರದಿ ನೀಡುವ ಮುನ್ನ ಸುದೀರ್ಘ ಚರ್ಚೆ ನಡೆಸಿರುವ ಉನ್ನತ ಸಮಿತಿ ಪ್ರಕರಣದಲ್ಲಿ ಒಟ್ಟು 21 ವಿದ್ಯಾರ್ಥಿಗಳನ್ನು ತಪ್ಪಿತಸ್ಥರೆಂದು ಗುರುತಿಸಿದೆ. ಇದರಲ್ಲಿ ಗಂಭೀರ ಶಿಸ್ತು ಉಲ್ಲಂಘನೆ ಮಾಡಿರುವ ಕನ್ಹಯ್ಯಕುಮಾರ್ ಹಾಗೂ ಇತರೆ ಐವರನ್ನು ಉಚ್ಛಾಟಿಸುವುದೇ ಸರಿಯಾದ ಕ್ರಮ ಎಂದು ಶಿಫಾರಸು ಮಾಡಿದೆ.

ವಿವಿಯ ನೀತಿ-ನಿಯಮಗಳು ಹಾಗೂ ಶಿಸ್ತು ಉಲ್ಲಂಘನೆ ಮಾಡಿರುವ ಇವರನ್ನು ಮುಂದುವರಿಸಿದರೆ ವಿದ್ಯಾರ್ಥಿಗಳು ಇದರಿಂದ ಪ್ರೇರೆಪಿತರಾಗಿ ಕಾನೂನು ಬಾಹೀರ ಚಟುವಟಿಕೆಗಳನ್ನು ನಡೆಸುತ್ತಾರೆ. ಮುಂದಿನವರಿಗೆ ಎಚ್ಚರಿಕೆ ಪಾಠವಾಗಬೇಕಾದರೆ ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದು ಸೂಚಿಸಲಾಗಿದೆ. ಕಳೆದ ಫೆ.10ರಂದು ದೆಹಲಿಯ ವಿವಿ ಆವರಣದಲ್ಲಿ ಸಂಸತ್ ಮೇಲೆ ದಾಳಿ ನಡೆಸಿ ನೇಣು ಗಂಬವೇರಿದ ಉಗ್ರ ಅಫ್ಜಲ್‌ಗುರು ಸ್ಮರಣಾರ್ಥ ಕಾರ್ಯಕ್ರಮವೊಂದನ್ನು ಕನ್ಹಯ್ಯಕುಮಾರ್ ಹಾಗೂ ಇತರರು ಏರ್ಪಡಿಸಿದ್ದರು.

ವಿವಿ ಅನುಮತಿಯನ್ನೂ ಪಡೆಯದೆ ಈ ಕಾರ್ಯಕ್ರಮ ನಡೆದ ವೇಳೆ ಕೆಲವರು ಭಾರತ ವಿರೋಧಿ ಘೋಷಣೆಗಳನ್ನು ಕೂಗಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದರು. ರಾಷ್ಟ್ರದೆಲ್ಲೆಡೆ ಇದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಆ ವೀಡಿಯೋ ತುಣುಕಿನಲ್ಲಿ ವಿದ್ಯಾರ್ಥಿಗಳು ಭಾರತವನ್ನು ತುಂಡು ತುಂಡು ಮಾಡುವುದಾಗಿ ಕೂಗಿದ್ದಲ್ಲದೆ, ಪಾಕಿಸ್ತಾನಕ್ಕೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಹೇಳಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ ಕನ್ಹಯ್ಯ ಕುಮಾರ್‌ನನ್ನು ರಾಷ್ಟ್ರವಿರೋಧಿ ಚಟುವಟಿಕೆಯ ಮೇಲೆ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ವಿದ್ಯಾರ್ಥಿಗಳಾದ ಉಮರ್‌ಖಾಲೀದ್, ಅನಿಬನ್‌ಭಟ್ಟಾಚಾರ್ಯ ಪೊಲೀಸರಿಗೆ ಶರಣಾಗಿದ್ದರು.

ಮಾ.3ರಂದು ಕನ್ಹಯ್ಯಗೆ ದೆಹಲಿ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಮಾ.11ರಂದು ವಿವಿ ಕನ್ಹಯ್ಯಕುಮಾರ್ ಹಾಗೂ ಇತರರ ವಿರುದ್ಧ ಜಾರಿಮಾಡಲಾಗಿದ್ದ ಅಮಾನತು ಆದೇಶವನ್ನು ಹಿಂಪಡೆಯಲಾಗಿತ್ತು. ಇದೀಗ ಉನ್ನತ ಸಮಿತಿ ಇವರನ್ನು ವಿವಿಯಿಂದ ಉಚ್ಛಾಟನೆ ಮಾಡುವಂತೆ ಸಲಹೆ ಮಾಡಿರುವುದು ಮತ್ತೊಂದು ವಿವಾದಕ್ಕೆ ಕಾರಣವಾಗುವ ಸಾಧ್ಯತೆಗಳೇ ನಿಚ್ಚಳವಾಗಿವೆ.

Write A Comment