
ಬೆಂಗಳೂರು: ಕಳಸ-ಬಂಡೂರಿ ಮಹಾದಾಯಿ ಯೋಜನೆ ವಿಷಯದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದ್ದು, ಪ್ರಧಾನಿ ನರೇಂದ್ರಮೋದಿ ಮಧ್ಯ ಪ್ರವೇಶಿಸುವಂತೆ ಆಗ್ರಹಿಸಿ ಇದೇ ೨೬ ರಂದು ರಾಜ್ಯಾದ್ಯಂತ ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ಸಂಪೂರ್ಣ ರೈಲ್ ಬಂದ್ ಚಳವಳಿ ನಡಸಲು ಕನ್ನಡ ಒಕ್ಕೂಟ ಕರ್ನಾಟಕ ನಿರ್ಧಾರ ಕೈಗೊಂಡಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ವಿವಿಧ ಕನ್ನಡಪರ ಸಂಘಟನೆಗಳು, ರೈತ ಮುಖಂಡರುಗಳು ಹೋರಾಟಗಾರರ ಸಭೆಯಲ್ಲಿ ಮಾ. ೨೬ ರಂದು ಬೆಳಗ್ಗೆ ೬ ರಿಂದ ಸಂಜೆ ೬ ರವರೆಗೆ ರೈಲ್ ಬಂದ್ ನಡೆಸಲು ನಿರ್ಧರಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ನಾಗರಾಜ್, ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಇದೇ ೨೬ ರಂದು ರೈಲ್ ಬಂದ್ ನಡೆಸಲಾಗುವುದು. ಬೆಂಗಳೂರಿನಲ್ಲಿ ೧ ಲಕ್ಷಕ್ಕೂ ಹೆಚ್ಚು ಮಂದಿ ಮೈಸೂರ್ಬ್ಯಾಂಕ್ ಸರ್ಕಲ್ನಿಂದ ರೈಲು ನಿಲ್ದಾಣಕ್ಕೆ ಜಾಥಾದಲ್ಲಿ ತೆರಳಿ ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.
ರಾಜ್ಯಾದ್ಯಂತ ೫ ಲಕ್ಷಕ್ಕೂ ಹೆಚ್ಚು ಜನರು ಈ ರೈಲು ಬಂದ್ ಚಳವಳಿಯಲ್ಲಿ ಭಾಗವಹಿಸಿ ರೈಲುಗಳನ್ನು ತಡೆಯಲಿದ್ದಾರೆ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ತಕ್ಷಣ ಈ ವಿಷಯದಲ್ಲಿ ಮಧ್ಯ ಪ್ರವೇಶಿಸಿ ಕರ್ನಾಟಕ, ಗೋವಾ, ಮಹಾರಾಷ್ಟ್ರ ಮುಖ್ಯಮಂತ್ರಿಗಳ ಸಭೆ ಕರೆದು ಕಳಸ ಬಂಡೂರಿ ಮಹಾದಾಯಿ ಯೋಜನೆಗೆ ಪರಿಹಾರ ಕಂಡುಹಿಡಿಯುವಂತೆ ಆಗ್ರಹಿಸಿದರು.
ಈ ಯೋಜನೆ ಜಾರಿಗಾಗಿ ಒತ್ತಾಯಿಸಿ ಕಳೆದ ೨೪೦ ದಿನಗಳಿಂದ ರೈತರು, ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ತಕ್ಷಣ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದರು.
ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದ್ ಮಾತನಾಡಿ, ೧೯೦ ಟಿಎಂಸಿಯಷ್ಟು ನೀರು ಅನಗತ್ಯವಾಗಿ ಸಮುದ್ರದ ಪಾಲಾಗುತ್ತಿದೆ.
ಕೇವಲ ೭ ಟಿಎಂಸಿ ನೀರು ಬಿಡಿ ಎಂದರೆ ವಿನಾಃ ಕಾರಣ ಸಮಸ್ಯೆ ತೆಗೆದಿದ್ದಾರೆ. ರಾಜ್ಯದಲ್ಲಿ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರಮೋದಿ ಅವರಿಗೆ ಈ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ಹೇಳಿರುವುದು ಖಂಡನಾರ್ಹ ಎಂದರು.
ಕಾರ್ಮಿಕ ಮುಖಂಡ ಅನಂತಸುಬ್ಬರಾವ್, ರೈತ ಸಂಘದ ಮುಖಂಡ ವೀರಸಂಗಯ್ಯ, ಸಿಪಿಎಂನ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.