
ಕೋಲ್ಕತ್ತ (ಪಿಟಿಐ): ಬಾಂಗ್ಲಾದಲ್ಲಿ ಈಚೆಗೆ ಏಷ್ಯಾ ಕಪ್ ಟ್ವೆಂಟಿ ಟೂರ್ನಿಯ ಚಾಂಪಿಯನ್ ಆಗಿ ಮೆರೆದಿದ್ದ ಭಾರತ ತಂಡವು ಗುರುವಾರ ವಿಶ್ವ ಟ್ವೆಂಟಿ–20 ಚಾಂಪಿಯನ್ಷಿಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ, ತವರಿನಲ್ಲಿ ಶ್ರೀಲಂಕಾ ವಿರುದ್ಧದ ಸರಣಿ ಮತ್ತು ಏಷ್ಯಾ ಕಪ್ ಪ್ರಶಸ್ತಿಗಳನ್ನು ಗೆದ್ದಿರುವ ಮಹೇಂದ್ರಸಿಂಗ್ ದೋನಿ ಬಳಗವು ಭರ್ತಿ ಆತ್ಮವಿಶ್ವಾಸದಲ್ಲಿದೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ಅವರ ಫಿಟ್ನೆಸ್ ಪರೀಕ್ಷೆಗೆ ಈ ಪಂದ್ಯವ ವೇದಿಕೆಯಾಗಬಹುದು. ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿ ಯಲ್ಲಿ ಮಂಡಿಯ ಗಾಯದಿಂದ ಅವರು ಬಳಲಿದ್ದರು.
ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೀರ್ಘಕಾಲದ ವಿಶ್ರಾಂತಿ ಪಡೆದಿದ್ದರು. ಹೋದ ತಿಂಗಳು ಆಸ್ಟ್ರೇಲಿಯಾ ಸರಣಿಯ ಸಂದರ್ಭದಲ್ಲಿಯೂ ಅವರು ತಂಡಕ್ಕೆ ಆಯ್ಕೆ ಆಗಿದ್ದರು. ಆದರೆ, ಫಿಟ್ನೆಸ್ ಕೊರತೆಯಿಂದ ತಾಯ್ನಾಡಿಗೆ ಮರಳಿದ್ದರು. ಮಾರ್ಚ್ 12ರಂದು ಮುಂಬೈನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ಪಂದ್ಯದಲ್ಲಿಯೂ ಅವರು ಆಡುವುದು ಖಚಿತ. ಈ ಎರಡೂ ಪಂದ್ಯಗಳಲ್ಲ ಅವರ ದೈಹಿಕ ಕ್ಷಮತೆಯ ಪರೀಕ್ಷೆ ನಡೆಯಲಿದೆ.
ಒಂದು ವೇಳೆ ಶಮಿ ಫಿಟ್ ಆಗದಿದ್ದರೂ ಭಾರತದ ಮಟ್ಟಿಗೆ ಈಗ ಬೌಲಿಂಗ್ ವಿಭಾಗದಲ್ಲಿ ಚಿಂತೆಯಿಲ್ಲ. ಅನುಭವಿ ಎಡಗೈ ವೇಗಿ ಆಶಿಶ್ ನೆಹ್ರಾ, ಯುವ ವೇಗಿಗಳಾದ ಜಸ್ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ ಉತ್ತಮ ಫಾರ್ಮ್ನಲ್ಲಿದ್ದಾರೆ. ನಾಯಕ ದೋನಿಯ ವಿಶ್ವಾಸವನ್ನೂ ಗಳಿಸಿದ್ದಾರೆ.
ಬಾಂಗ್ಲಾದಲ್ಲಿ ಯುಎಇ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಪವನ್ ನೇಗಿ, ಅನುಭವಿ ಆಫ್ಸ್ಪಿನ್ನರ್ ಹರಭಜನ್ ಸಿಂಗ್, ಮುಂಬೈ ಬ್ಯಾಟ್ಸ್ಮನ್ ಅಜಿಂಕ್ಯ ರಹಾನೆ ಅವರಿಗೂ ಇಲ್ಲೊಂದು ಅವಕಾಶ ಸಿಗುವ ನಿರೀಕ್ಷೆ ಇದೆ. ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಮಹೇಂದ್ರಸಿಂಗ್ ದೋನಿ ಅಮೋಘ ಫಾರ್ಮ್ನಲ್ಲಿದ್ದಾರೆ.
ವಿಂಡೀಸ್ ತಂಡದಲ್ಲಿ ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್ ಅವರು ಹೆಚ್ಚು ಅಪಾಯಕಾರಿ ಆಟಗಾರರು. ಟ್ವೆಂಟಿ–20 ಕ್ರಿಕೆಟ್ನ ಸಿಡಿಲಮರಿ ಎಂದೇ ಕ್ರಿಸ್ ಗೇಲ್ ಪರಿಚಿತರು. ಅವರನ್ನು ಕಟ್ಟಿಹಾಕುವಲ್ಲಿ ಸಫಲರಾದರೆ ಪಂದ್ಯದ ಮೇಲೆ ಹಿಡಿತ ಸಾಧಿಸುವುದು ಸುಲಭ.
ಡ್ವೆನ್ ಬ್ರಾವೊ, ಜೇಸ್ ಹೋಲ್ಡರ್, ಕಾರ್ಲೋಸ್ ಬ್ರಾಥ್ವೈಟ್ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಸಮರ್ಥರಾಗಿದ್ದಾರೆ. ತುಂಬು ಉತ್ಸಾಹ ಮತ್ತು ಆತ್ಮವಿಶ್ವಾಸದಲ್ಲಿರುವ ಆತಿಥೇಯ ಬಳಗಕ್ಕೆ ತಡೆಯೊಡ್ಡಲು ವಿಂಡೀಸ್ ಬಳಗ ಯಾವ ರೀತಿಯ ತಂತ್ರ ಹೆಣೆಯಲಿದೆ ಕಾದು ನೋಡಬೇಕು.
ಪಂದ್ಯ ಆರಂಭ: ರಾತ್ರಿ 7.30