
ಕರಾಚಿ: ಪಾಕಿಸ್ತಾನ ಮಾಧ್ಯಮಗಳು ಭಾರತದ ವಿರುದ್ಧ ಏಕೆ ಅಷ್ಟೊಂದು ದ್ವೇಷ ಸಾಧಿಸುತ್ತಿವೆ ಎಂದು ಪಾಕ್ ಕ್ರಿಕೆಟ್ ತಂಡದ ನಾಯಕ್ ಶಾಹಿದ್ ಅಫ್ರಿದಿ ಪತ್ರಕರ್ತರನ್ನು ಪ್ರಶ್ನಿಸಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಮಾರ್ಚ್ 19ರಂದು ಭಾರತದ ವಿರುದ್ಧ ಧರ್ಮಶಾಲಾದಲ್ಲಿ ನಡೆಯುವ ಪಂದ್ಯದಲ್ಲಿ ಗೆಲ್ಲಲೇ ಬೇಕೆಂಬ ಒತ್ತಡ ನಿಮ್ಮಲ್ಲಿದೆಯೇ ಎಂಬ ಪಾಕ್ ಪತ್ರಕರ್ತರ ಪ್ರಶ್ನೆಗೆ ಆಫ್ರಿದಿ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನ ಜನತೆ ಹಾಗೂ ಮಾಧ್ಯಮಗಳು ಭಾರತದ ವಿರುದ್ಧ ಪಂದ್ಯವನ್ನು ಏಕೆ ಇಷ್ಟೊಂದು ಗಂಭೀರವಾಗಿ ಪರಿಗಣಿಸುತ್ತವೆಯೋ ಗೊತ್ತಿಲ್ಲ. ನಾವು ಬೇರೆ ತಂಡಗಳ ಜತೆಗೂ ಪಂದ್ಯ ಆಡುತ್ತೇವೆ. ಆಗ ಇರದ ಹುಚ್ಚು ದೇಶಾಭಿಮಾನ ಭಾರತದ ವಿರುದ್ಧ ಆಡುವಾಗ ಮಾಧ್ಯಮಗಳು ಏಕೆ ಸೃಷ್ಟಿ ಮಾಡುತ್ತಿವೆ? ಈ ರೀತಿ ಇಂಡೋ-ಪಾಕ್ ಪಂದ್ಯವನ್ನು ವಿಭಿನ್ನವಾಗಿ ಚಿತ್ರಿಸುವ ಮೂಲಕ ಜನರಲ್ಲಿ ದ್ವೇಷದ ಭಾವನೆ ಹೆಚ್ಚುತ್ತಿದೆ ಎಂದು ಆರೋಪಿಸಿದರು.
ಭಾರತೀಯ ಕಿರುತೆರೆ ಶೋಗಳನ್ನು ಪಾಕಿಸ್ತಾನದ ಪ್ರಜೆಗಳು ನೋಡುತ್ತಾರೆ. ಚಿತ್ರಮಂದಿರಗಳಲ್ಲಿ ಭಾರತೀಯ ಸಿನಿಮಾ ವೀಕ್ಷಿಸುತ್ತಾರೆ. ಅಷ್ಟೇ ಏಕೆ ಭಾರತೀಯ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ನೆರವೇರುತ್ತದೆ. ಆದರೆ ಕ್ರೀಡೆ ವಿಚಾರಕ್ಕೆ ಬಂದರೆ ಯುದ್ಧದಂತೆ ಬಿಂಬಿಸಲಾಗುತ್ತದೆ ಎಂದು ಆಫ್ರಿದಿ ತಮ್ಮ ಮನದಾಳದ ಮಾತನ್ನು ವ್ಯಕ್ತಪಡಿಸಿದ್ದಾರೆ.