
ನವದೆಹಲಿ: ಮಾರ್ಚ್ 19ರಂದು ಹಿಮಾಚಲಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಬೇಕಿರುವ ಇಂಡೋ-ಪಾಕ್ ಪಂದ್ಯ ಸ್ಥಳಾಂತರವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಸ್ಪಷ್ಟಪಡಿಸಿದೆ.
ಇಂಡೋ-ಪಾಕ್ ಪಂದ್ಯಕ್ಕೆ ಹಿಮಾಚಲ ಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪೂರ್ವ ನಿಗದಿಯಂತೆ ಇಂಡೋ-ಪಾಕ್ ಪಂದ್ಯ ಧರ್ಮಶಾಲಾ ಕ್ರೀಡಾಂಗಣದಲ್ಲೇ ನಡೆಯಲಿದೆ ಅದರಲ್ಲಿ ಯಾವುದೇ ಸಂಶಯ ಬೇಡ ಎಂದು ಬಿಸಿಸಿಐ ಹೇಳಿದೆ.
ಟಿ20 ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಪಂದ್ಯ ಧರ್ಮಶಾಲೆಯಲ್ಲಿ ಆಯೋಜಿಸಲಾಗಿತ್ತು. ಆದರೆ ಪಠಾನ್ ಕೋಟ್ ವಾಯುನೆಲೆ ಮೇಲೆ ಭಯೋತ್ಪಾದಕ ದಾಳಿಯಲ್ಲಿ ಹಿಮಾಚಲ ಪ್ರದೇಶದ ಯೋಧರು ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಧರ್ಮಶಾಲೆಯಲ್ಲಿ ಆಡಬಾರದು ಎಂದು ಕೆಲ ಸಂಘಟನೆಗಳು ಆಗ್ರಹಿಸಿದ್ದವು.
ಧರ್ಮಶಾಲಾದಲ್ಲಿ ನಡೆಯಲಿರುವ ಪಂದ್ಯಕ್ಕೆ ಅಭದ್ರತೆ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆತಂಕ ವ್ಯಕ್ತಪಡಿಸಿದ್ದು, ಪಂದ್ಯ ಧರ್ಮಶಾಲಾದಲ್ಲೇ ನಡೆಯಲಿದೆ. ಇದಕ್ಕೆ ಹಿಮಾಚಲ ಪ್ರದೇಶ ಸರ್ಕಾರ ಸೂಕ್ತ ಭದ್ರತೆ ಒದಗಿಸಲಿದೆ ಎಂದು ಬಿಸಿಸಿಐ ಹೇಳಿದೆ.