ನವದೆಹಲಿ, ಮಾ.8- ಗ್ರೇಟರ್ ನೋಯ್ಡಾದ ಟಿಗ್ರಿ ಎಂಬ ಹಳ್ಳಿಯಲ್ಲಿ 16 ವರ್ಷದ ಬಾಲಕಿಯೊಬ್ಬಳ ಮೇಲೆ ಅವಳ ಗೆಳೆಯನೇ ಅತ್ಯಾಚಾರ ನಡೆಸಿ ನಂತರ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಶೇ.60ಕ್ಕೂ ಹೆಚ್ಚು ಸುಟ್ಟ ಗಾಯದಿಂದ ನರಳುತ್ತಿರುವ ಬಾಲಕಿಯನ್ನು ದೆಹಲಿ ಸಫ್ದರ್‌ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿರುವ ಬಾಲಕಿಯ ಬಳಿ ಪೊಲೀಸರ ಒಂದು ತಂಡವಿದ್ದು, ಅವಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ ಎಂದು ಪೊಲೀಸ್ ಅಧಿಕಾರಿ ರಾಕೇಶ್ ಯಾದವ್ ತಿಳಿಸಿದ್ದಾರೆ.
ನಿನ್ನೆ ಬಾಲಕಿಯ ಮನೆಗೆ ಬಂದಿದ್ದ ಗೆಳೆಯ ಅವಳೊಂದಿಗೆ ಮನೆಯ ಮಹಡಿ ಮೇಲೆ ಮಾತನಾಡುತ್ತಿದ್ದವನು ಅವಳ ಮೇಲೆ ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ್ದಾನೆ. ದುಷ್ಕರ್ಮಿ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಶೋಧ ನಡೆದಿದೆ.ಬಾಲಕಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಇಬ್ಬರೂ ಬೇರೆ ಬೇರೆ ಕೋಮಿನವರಾಗಿದ್ದು, ಟಿಗ್ರಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ರಾಕೇಶ್ ಯಾದವ್ ಹೇಳಿದ್ದಾರೆ.