ರಾಷ್ಟ್ರೀಯ

ಹುಡ್ಗೀರಿಗೆ ಕೆಲ್ಸ ಯಾಕ್‌ ಬೇಕು?

Pinterest LinkedIn Tumblr

keerthi-suresh-stills-at-neಆಫೀಸಿನಿಂದ ಸಂಜೆ ಗಿಜಿಗಿಜಿಗುಡುವ ಬೆಂಗಳೂರಿನ ಟ್ರಾಫಿಕ್‌ನಲ್ಲಿ ರಸ್ತೆ ದಾಟಿ ಸಿಟಿಬಸ್ಸಿನ ನೂಕುನುಗ್ಗಲಿನಲ್ಲಿ ಹೇಗೋ ತೂರಿಕೊಂಡು ರೂಮಿನತ್ತ ಬಂದಾಗ ತಲೆ ಕೆಟ್ಟುಹೋಗಿತ್ತು. ರೂಮಿನೊಳಗೆ ಕಾಲಿಟ್ಟು ಆಗ ತಾನೇ ಮಧ್ಯಾಹ್ನದ ನಿದ್ದೆಯಿಂದೆದ್ದು ಆಕಳಿಸುತ್ತಾ ಬಂದ ಚಂದುವಿಗೊಂದು ಹಾಯ್‌ ಹೇಳಿ ಕೂತೆ. ಆಗಲೇ ಕಾಫಿ ಮಾಡಲು ಅಡಿಗೆಮನೆಯಲ್ಲಿದ್ದ ವಿದ್ಯಾಗೆ ನನಗೂ ಕಾಫಿ ಮಾಡಲು ಹೇಳಿದೆ.

ಇನ್ನೇನು ಸಿಡಿದೇ ಹೋಗುತ್ತೇನೆ ಎನ್ನುತ್ತಿದ್ದ ತಲೆಯನ್ನು ಹಿಡಿದುಕೊಂಡು ಕೂತಿದ್ದೆ. ಚಂದು ಮೊಬೈಲಿನಲ್ಲಿ ಮುಳುಗಿದ್ದಳು. ವಿದ್ಯಾ ನಾ ಮಾಡಿದ ಕಾಫಿ ಕುಡೀತೀಯಲ್ಲ ಈಗ, ತಲೆನೋವು ಹೇಗೆ ಓಡಿಹೋಗತ್ತೆ ನೋಡು ಎನ್ನುತ್ತಾ ಕಾಫಿ ತಂದಿಟ್ಟಳು. ಅವಳೇ ಹೇಳಿದಂತೆ ಕಾಫಿ ಕುಡಿದ ಮೇಲೆ ತಲೆನೋವು ಕಮ್ಮಿಯಾದಂತಾಗಿ ಮನಸ್ಸಿಗೆ ಹಾಯೆನಿಸಿತು.

ಥೂ, ಬಹಳ ಹಿಂಸೆ ಕಣೇ. ಅದೇನು ಕೆಲಸವೋ. ದಿನಾ ಜಗತ್ತು ಕಣಿºಡುವ ಮೊದಲು ಹೋಗಬೇಕು; ಸಂಜೆ ಸಿಟಿ ಬಸ್ಸಿನಲ್ಲಿ ನಿಂತ್ಕೊಂಡು ಅರೆಜೀವವಾಗಿ ಬರಬೇಕು. ದಿನಾ ಅದೇ ದಿನಚರಿ. ಸಾಕಾಗೊØàಗಿದೆ. ಇದಕ್ಕಿಂತ ಮನೆಯಲ್ಲಿದ್ದರೆ ಹಾಯಾಗಿರಬಹುದಿತ್ತು ಎಂದ ನನ್ನ ಮಾತನ್ನು ಚಂದು ಅಲ್ಲಗಳೆದಳು.

ಕೆಲಸಕ್ಕೆ ಹೋಗೋದು ಕಿರಿಕಿರಿ ಅನ್ನೋದೇನೋ ನಿಜ. ಆದರೆ ಮನೆಯಲ್ಲಿ ಎಷ್ಟು ದಿನಾಂತ ಹಾಯಾಗಿರ್ತೀಯ? ಹೆಚ್ಚೆಂದರೆ ಮೂರು-ನಾಲ್ಕು ದಿನ. ಆಮೇಲೆ ಕೆಲಸವೇ ಮಾಡದೆ ಸುಮ್ಮನೇ ಕೂರೋದೆ ಬೇಸರ ಅನ್ನಿಸತ್ತೆ. ನಂಗೆ ಅದಕ್ಕಿಂತ ವರ್ಕಿಂಗ್‌ ಲೈಫೇ ಇಷ್ಟ. ಎಂದ ಚಂದು ಮಾತನ್ನು ವಿದ್ಯಾಳೂ ಅನುಮೋದಿಸಿದಳು.

ಹೌದು ಕಣೇ. ಮನೆಯಲ್ಲಿ ಖುಷಿಯಾಗೇನೋ ಇರ್ತೀವಿ ನಿಜ. ಆದ್ರೆ ಇಲ್ಲಿ ಫ್ರೆಂಡ್ಸ್‌ ಜೊತೆಗಿನ ಮೋಜು-ಮಾದರಿಯಲ್ಲಿ ಸಿಗೋ ಮಜಾನೇ ಬೇರೆ. ಹಾಗೇ, ಮನೇಲಿದ್ರೆ ನಿನ್ನ ಹುಡುಗನ ಜೊತೆಗೆ ರಾತ್ರಿ ಪಿಸುಮಾತನಾಡುತ್ತಾ ಮುತ್ತಗಳನ್ನೆಣಿವುದಕ್ಕೆ ಅವಕಾಶ ಇರೋದಿಲ್ಲ ನೋಡು! ಎಂದು ಕಣ್ಣು ಮಿಟುಕಿಸುತ್ತಾ ವಿದ್ಯಾ ಹೇಳಿದ ಮಾತಿಗೆ ಮೂವರೂ ನಕ್ಕೆವು.

ಹೌದು, “ಉದ್ಯೋಗಕ್ಕೆ ಪುರುಷ ಲಕ್ಷಣಂ’ ಎನ್ನುವ ಗಾದೆ ನಮ್ಮ ಕಾಲದಲ್ಲಿ ಸುಳ್ಳಾಗಿದೆ. ಎಲ್ಲ ಕ್ಷೇತ್ರದಲ್ಲೂ ಹುಡುಗರಿಗಿಂತ ನಾವೇನು ಕಮ್ಮಿ ಎನ್ನುವಂತೆ ಹುಡುಗಿಯರು ಮಿಂಚುತ್ತಿದ್ದಾರೆ. ಕೆಲ ಹುಡುಗಿಯರಿಗೆ ವಿದ್ಯಾಭ್ಯಾಸ ಮುಗಿದಮೇಲೆ ಕೆಲಸಕ್ಕೆ ಸೇರುವುದು ಅನಿವಾರ್ಯವಾದರೆ ಇನ್ನು ಹಲವರಿಗೆ ಅದೊಂದು ಫ್ಯಾಶನ್‌. ಇಷ್ಟು ಒದ್ದಾಡಿ ಯಾಕೆ ಕೆಲಸಕ್ಕೆ ಹೋಗ್ಬೇಕು? ಮನೆಯಲ್ಲಿ ಆರಾಮಾಗಿ ಇರಬಹುದಲ್ಲ! ಎಂದು ಕೇಳಿದರೆ ಅಪ್ಪನ ಪಾಕೆಟ್‌ ಮನಿ ನನಗೊಂದು ಲಿಪ್‌ಸ್ಟಿಕ್‌ ತಗೋಳ್ಳೋಕೂ ಸಾಕಾಗುವುದಿಲ್ಲ ಎಂದು ಕಿಸಕ್ಕನೆ ನಗುತ್ತಾರೆ ಹುಡುಗಿಯರು! “ನಾವೇಕೆ ಕೆಲಸಕ್ಕೆ ಹೋಗಬೇಕು?’ ಎನ್ನುವ ಪ್ರಶ್ನೆಗೆ ಅವರೇ ಹೇಳಿದ ಉತ್ತರಗಳು ಇಲ್ಲಿವೆ-

– ಚಿಕ್ಕಂದಿನಿಂದಲೂ ಅಪ್ಪನ ಪಾಕೆಟ್‌ ಮನಿಗೆ ಕೈಚಾಚಿ ಸಾಕಾಗಿದೆ. ಅಪ್ಪನಿಗೆ ಕೊಡಲು ಬೇಸರವಿಲ್ಲದಿದ್ದರೂ ಅವರ ಎದೆಯೆತ್ತರಕ್ಕೆ ಬೆಳೆದ ನನಗೆ ಕೇಳಲು ಮುಜುಗರ. ಹೇಗೂ ವಿದ್ಯಾಭ್ಯಾಸ ಮುಗಿದಿದೆ, ಡಿಗ್ರಿಯೊಂದು ಕೈಯಲ್ಲಿದೆ. ನನ್ನದೇ ದುಡಿಮೆಯಲ್ಲಿ ನನ್ನ ಖರ್ಚನ್ನು ನಿಭಾಯಿಸಿದ ಸಂತೃಪ್ತಿ ನನಗಿರುತ್ತದೆ!

– ಅಮ್ಮ ಹಾಗೂ ಹಿಂದಿನ ಕಾಲದ ಮಹಿಳೆಯರನ್ನು ನೋಡಿದರೇ ಆಶ್ಚರ್ಯವೆನಿಸುತ್ತದೆ! ಮನೆಗೆಲಸ, ಗಂಡ-ಮಕ್ಕಳ ಸಂತೋಷ ನೋಡಿ ಖುಷಿಪಡುತ್ತಿದ್ದ, ಎಲ್ಲೋ ಸಮಯ ಒದಗಿ ಬಂದಾಗ ಮನೆಯ ಹೊರಗೆ ಕಾಲಿಡುತ್ತಿದ್ದವರು ಅವರು! ಆದರೆ ನನಗೀಗ ಅರ್ಥವಾಗಿದೆ- ನಾಲ್ಕು ದಿಕ್ಕಿನ ಜಗತ್ತನ್ನು ಕಣ್ತುಂಬಿಕೊಳ್ಳುವುದರಲ್ಲಿ ಸಿಗುವ ಖುಷಿ ನಾಲ್ಕು ಗೋಡೆಯ ಮನೆಯಲ್ಲಿ ಬಂಧಿಯಾಗಿರುವುದರಲ್ಲಿಲ್ಲ!!

– ಗೆಳತಿಯ ಹುಟ್ಟುಹಬ್ಬಕ್ಕೆ ಒಂದು ಸಣ್ಣ ಉಡುಗೊರೆ, ಕಲೀಗ್‌ನ ಮದುವೆಗೆ ಶುಭ ಹಾರೈಕೆಯ ಜೊತೆಗೊಂದು ಗಿಫ‌ುr, ಮನೆಗೆ ಹೋಗುವಾಗ ಅಮ್ಮನಿಗೆ ಬಳೆ, ಅಪ್ಪನಿಗೆ ಅವರಿಷ್ಟದ ಮೈಸೂರ್‌ ಪಾಕ್‌, ತಮ್ಮನಿಗೆ ಅವ ಬಯಸಿದ್ದ ವೈಲ್ಡ್‌ಕ್ರಾಫ್ಟ್ ಬ್ಯಾಗ್‌ ಇವನ್ನು ನನ್ನದೇ ದುಡ್ಡಿನಲ್ಲಿ ತೆಗೆದುಕೊಡುವುದರಲ್ಲಿ ತೃಪ್ತಿ ಇದೆ. ಅಪ್ಪ-ಅಮ್ಮನಿಗೆ ನಾನೆಂದರೆ ಹೆಮ್ಮೆ, ತಮ್ಮನಿಗೆ ನಾನು ಬಯಸಿದ್ದೆಲ್ಲ ತಂದುಕೊಡುವ ಅಚ್ಚುಮೆಚ್ಚಿನ ಅಕ್ಕ!

– ದುಡಿಮೆ ನಮ್ಮದೇ, ಖರ್ಚೂ ನಮ್ಮದೇ. ಹಾಗಾಗಿ ನಮ್ಮ ಬದುಕಿನ ಆಯ್ಕೆಗಳಲ್ಲಿ ಹಕ್ಕು ನಮಗೆ ಮಾತ್ರ! ಇನ್ನೊಬ್ಬರ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ! ಇಷ್ಟರಮಟ್ಟಿಗಿನ ಸ್ವಾತಂತ್ರÂ ನಮ್ಮ ಪಾಲಿಗಿರುತ್ತದೆ.

– ಮದುವೆಯಾಗುವ ಅಥವಾ ಆದ ಹುಡುಗನಿಗೆ ನನ್ನ ದುಡಿಮೆ ಮನೆಯ ಭಾರವನ್ನು ನಿಭಾಯಿಸಲು ಸಹಾಯ ಮಾಡಬಲ್ಲದು; ಹಾಗೂ ಅವನೊಂದು ವೇಳೆ ನನ್ನನ್ನು ತಿರಸ್ಕರಿಸಿದರೆ ಮನೆಯವರಿಗೆ ಭಾರವಾಗಿ ನಾನಿರುವುದಿಲ್ಲ. ಏಕೆಂದರೆ ನನ್ನ ಜೀವನದ ಖರ್ಚನ್ನು ನನ್ನದೇ ದುಡಿಮೆಯಿಂದ ಭರಿಸಿಕೊಳ್ಳುತ್ತೇನೆ.

– ಹೊರಜಗತ್ತನ್ನು ನೋಡುತ್ತೇನೆ, ಹೆಚ್ಚು ಹೆಚ್ಚು ಕಲಿಯುತ್ತೇನೆ. ಗೆಳೆತನದ ಖುಷಿ ಅನುಭವಿಸುತ್ತೇನೆ, ಕೆಲಸದಲ್ಲಿ ಚಿಕ್ಕ-ಪುಟ್ಟ ದುಃಖವನ್ನು ಮರೆಯುತ್ತೇನೆ. ಅಮ್ಮನ ಪ್ರೀತಿಯನ್ನು ಮಿಸ್‌ ಮಾಡಿಕೊಳೆ¤àನೆ, ಅಪ್ಪನ ಬೈಗುಳವನ್ನು ಆಗಾಗ ನೆನಪಿಸಿಕೊಂಡು ನಗುತ್ತೇನೆ!

ಹಾಗೆಂದು ಕೆಲಸಕ್ಕೆ ಹೋಗುವುದು ಅಷ್ಟು ಸುಲಭದ ಮಾತೇನೂ ಅಲ್ಲ. ಕಿರಿಕಿರಿಯ ಮ್ಯಾನೇಜರ್‌, ತಿಂಗಳ ಟಾರ್ಗೆಟ್‌ ರೇಟಿಂಗ್‌, ಆಫೀಸಿನ ಹುಡುಗರ ವಕ್ರದೃಷ್ಟಿ, ರೂಮಿನಲ್ಲಿ ಜೊತೆಗಾತಿಯರ ಜೊತೆ ಹೊಂದಾಣಿಕೆಯ ಜೀವನ, ಬಿಡುವಿಲ್ಲದ ಕೆಲಸ. ಇವೆಲ್ಲವನ್ನೂ ನಿಭಾಯಿಸಬೇಕಿರುತ್ತದೆ.

ಇದರ ಜೊತೆಜೊತೆಗೇ ಗೆಳೆಯರೊಡನೆ ವೀಕೆಂಡ್‌ ಮಸ್ತಿ, ವಾರಕ್ಕೊಂದು ಸಿನಿಮಾ, ಶಾಪಿಂಗ್‌, ಪುಟ್ಟ-ಪುಟ್ಟ ಖುಷಿಗಳು, ಬರ್ತಡೇ ಪಾರ್ಟಿಗಳು. ಟೋಟಲೀ, ಕೆಲಸ ನಮಗೆ ಮತ್ತೂಂದು ಜಗತ್ತು, ಮತ್ತೂಂದು ಕುಟುಂಬವನ್ನು ಕೊಡುತ್ತದೆ. ಜೊತೆಗೊಂದಿಷ್ಟು ಅನುಭವ ಮತ್ತು ನೆನಪುಗಳನ್ನೂ! ಕೆಲಸಕ್ಕೆ ಹೋಗುವ ಎಲ್ಲಾ ಹುಡುಗಿಯರನ್ನೂ ಅಭಿನಂದಿಸುತ್ತಾ ಮನಬಿಚ್ಚಿ ಮಾತೊಂದನ್ನು ಹೇಳಬೇಕಿದೆ- ಹ್ಯಾಪೀ ವಿಮೆನ್ಸ್‌ ಡೇ.

-ರಾಧಾ ಹೆಗಡೆ

-ಉದಯವಾಣಿ,

Write A Comment