
ಬೆಂಗಳೂರು: ರಸ್ತೆ ಮೇಲೆ ಬಿದ್ದದ್ದ 10 ರುಪಾಯಿಗೆ ಆಸೆ ಬಿದ್ದ ಉದ್ಯಮಿಯೊಬ್ಬರು ರು. 3.5 ಲಕ್ಷ ಹಣ ಕಳೆದುಕೊಂಡ ಘಟನೆ ಸುಂಕದಕಟ್ಟೆಯಲ್ಲಿ ನಡೆದಿದೆ.
ಹಣ ದೋಚುವ ಸಲುವಾಗಿ ಕಳ್ಳರು ರಸ್ತೆ ಮೇಲೆ ರು. 10 ನೋಟುಗಳನ್ನು ಎಸೆದು ಉದ್ಯಮಿ ಗಮನ ಬೇರೆಡೆ ಸೆಳೆದು 3.5 ಲಕ್ಷ ಹಣವಿದ್ದ ಬ್ಯಾಗ್ ದೋಚಿ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಸುಂಕದಕಟ್ಟೆ ನಿವಾಸಿ ಪ್ರಸಾದ್ಕುಮಾರ್ ಶೆಟ್ಟಿ ಎಂಬುವರು ದೂರು ಕೊಟ್ಟಿದ್ದಾರೆ.
ಸ್ವಂತ ಕಾರ್ಖಾನೆ ನಡೆಸುತ್ತಿರುವ ಶೆಟ್ಟಿ, ಕಾರ್ಖಾನೆಗೆ ಸಾಮಗ್ರಿಗಳನ್ನು ತರುವ ಉದ್ದೇಶದಿಂದ ಮಧ್ಯಾಹ್ನ 1.15ರ ಸುಮಾರಿಗೆ ಸುಂಕದಕಟ್ಟೆಯ ವಿಜಯಾಬ್ಯಾಂಕ್ ಶಾಖೆಯಲ್ಲಿ ರು. 3.5 ಲಕ್ಷ ಡ್ರಾ ಮಾಡಿದ್ದಾರೆ. ನಂತರ ಬ್ಯಾಂಕ್ನಿಂದ ಹೊರ ಬಂದ ಅವರು, ಫುಟ್ಪಾತ್ ಬಳಿ ನಿಲ್ಲಿಸಿದ್ದ ತಮ್ಮ ಬೈಕ್ ಬಳಿ ಹೋಗಿದ್ದಾರೆ.
ಈ ವೇಳೆ ಅಲ್ಲೇ ನಿಂತಿದ್ದ ಇಬ್ಬರು ಅಪರಿಚಿತರು, ರಸ್ತೆ ಮೇಲೆ ರು. 10ರ ನೋಟುಗಳನ್ನು ಎಸೆದು, ‘ಸರ್ ನಿಮ್ಮ ಹಣ ಬಿದ್ದಿದೆ’ ಎಂದು ಹೇಳಿದ್ದಾರೆ. ಅವರ ಮಾತನ್ನು ನಂಬಿದ ಶೆಟ್ಟಿ, ಹಣದ ಬ್ಯಾಗನ್ನು ಬೈಕ್ ಮೇಲಿಟ್ಟು ಆ ನೋಟುಗಳನ್ನು ಎತ್ತಿಕೊಳ್ಳಲು ಹೋಗಿದ್ದಾರೆ. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆರೋಪಿಗಳು, ಬ್ಯಾಗ್ ತೆಗೆದುಕೊಂಡು ಮುಂದೆ ಮೊದಲೇ ನಿಲ್ಲಿಸಿದ್ದ ಬೈಕ್ನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.