
ನವದೆಹಲಿ: ಮುಂಬರುವ ಟಿ20 ವಿಶ್ವಕಪ್ ಸರಣಿಯ ನಿಮಿತ್ತ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ರಾಜಕೀಯ ಕರಿನೆರಳು ಬಿದ್ದಿದ್ದು, ಭದ್ರತೆ ನೀಡಲು ಹಿಮಾಚಲಪ್ರದೇಶ ಸರ್ಕಾರ ನಿರಾಕರಿಸಿದೆ.
ಇದೇ ಮೊದಲ ಬಾರಿಗೆ ಭಾರತದ ಆತಿಥ್ಯದೊಂದಿಗೆ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯ ಇಂಡೋ-ಪಾಕ್ ಮ್ಯಾಚ್ಗೆ ವಿಘ್ನ ಎದುರಾಗಿದ್ದು, ಮಾರ್ಚ್ 19ರಂದು ಧರ್ಮಶಾಲಾದಲ್ಲಿ ನಡೆಯಬೇಕಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಹಿಮಾಚಲ ಪ್ರದೇಶ ಸರ್ಕಾರ, ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿದ್ದು, ವೀರಭದ್ರ ಸಿಂಗ್ ಮುಖ್ಯಮಂತ್ರಿಯಾಗಿದ್ದಾರೆ. ಇತ್ತೀಚೆಗೆ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಠಾಣ್ಕೋಟ್ ವಾಯುನೆಲೆ ಮೇಲಿನ ಭಯೋತ್ಪಾದಕ ದಾಳಿ ಹಾಗೂ ಅದರಲ್ಲಿ ಹಿಮಾಚಲ ಪ್ರದೇಶದ ಸೈನಿಕರು ಮೃತಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯರ ಭಾವನೆಗಳಿಗೆ ಬೆಲೆ ಕೊಡುವ ಸಲುವಾಗಿ ಪಂದ್ಯಕ್ಕೆ ಆತಿಥ್ಯ ವಹಿಸಿಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಪಾಕಿಸ್ತಾನ ತಂಡಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸಿಎಂ ವೀರಭಧ್ರ ಸಿಂಗ್ ಪತ್ರ ಬರೆದಿದ್ದಾರೆ. ‘ಟಿ20 ವಿಶ್ವಕಪ್ನ ಇತರ ಪಂದ್ಯಗಳಿಗೆ ನಮ್ಮ ವಿರೋಧವಿಲ್ಲ. ಆದರೆ, ಪಾಕಿಸ್ತಾನ ತಂಡ ಹಿಮಾಚಲದಲ್ಲಿ ಆಡಲು ವಿರೋಧವಿದೆ’ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ವೀರಭದ್ರ ಸಿಂಗ್ ಅವರ ಈ ನಿರ್ಧಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಪಂದ್ಯ ಆಯೋಜಿಸುವ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಬಿಸಿಸಿಐ ಖಾರವಾಗಿ ಪ್ರತಿಕ್ರಿಯಿಸಿದೆ.