
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಗುರುವಾರ ಜೈಲಿನಿಂದ ಬಿಡುಗಡೆಯಾಗುತ್ತಿರುವ ಸಂಭ್ರಮದಲ್ಲಿ ನಗರದ ರೆಸ್ಟೋರೆಂಟ್ವೊಂದರಲ್ಲಿ ಇಂದು ಚಿಕನ್ ಊಟವನ್ನು ಫ್ರೀಯಾಗಿ ಕೊಡಲಾಗ್ತಿದೆ.
ಇಲ್ಲಿನ ನೂರ್ ಮೊಹಮ್ಮದಿ ಹೋಟೆಲ್ನಲ್ಲಿ ಇಂದು ಮಧ್ಯಾಹ್ನ 12 ರಿಂದ ಮಧ್ಯರಾತ್ರಿ 12ರವರೆಗೆ ‘ಚಿಕನ್ ಸಂಜೂ ಬಾಬಾ’ ಎಂಬ ಹೆಸರಿನ ಚಿಕನ್ ಊಟವನ್ನು ಯಾವುದೇ ಹಣ ಪಡೆಯದೇ ಹೋಟೆಲ್ಗೆ ಬರುವ ಸಂಜಯ್ ದತ್ ಅಭಿಮಾನಿಗಳಿಗೆ ನೀಡಲಾಗ್ತಿದೆ.
ಈ ಮೂಲಕ ಸಂಜಯ್ ಬಿಡುಗಡೆಯಾಗುತ್ತಿರುವ ಸಂಭ್ರಮವನ್ನು ಹೋಟೆಲ್ನಲ್ಲಿ ಆಚರಿಸಲಾಗ್ತಿದೆ. ನಮ್ಮ ಹೋಟೆಲ್ನನ್ನು 1986ರಲ್ಲಿ ಉದ್ಘಾಟಿಸಿದ ಸಂಜಯ್ ದತ್ ಆಗಾಗ ಹೋಟೆಲ್ಗೆ ಬರುತ್ತಿದ್ದರು. 2010 ರಲ್ಲಿ ಅವರೇ ನಮ್ಮ ಹೋಟೆಲ್ನಲ್ಲಿ ಚಿಕನ್ ಗ್ರೇವಿ ತಯಾರಿಸಿದ್ದರು. ಅದಕ್ಕೆ ನಾವು ಚಿಕನ್ ಸಂಜು ಬಾಬಾ ಎಂದು ಹೆಸರಿಟ್ಟೆವು ಎಂದು ಹೋಟೆಲ್ ಮಾಲೀಕ ಖಾಲೀದ್ ಹಕೀಮ್ ಹೇಳುತ್ತಾರೆ.
1993 ಮುಂಬೈ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ 56 ವರ್ಷದ ಸಂಜಯ್ ದತ್ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಇದೀಗ ಜೈಲು ಶಿಕ್ಷೆಯ ಅವಧಿ ಪೂರ್ಣವಾಗಿರುವ ಹಿನ್ನೆಲೆಯಲ್ಲಿ ನಾಳೆ ಮಹಾರಾಷ್ಟ್ರದ ಯರವಾಡ ಜೈಲಿನಿಂದ ಸಂಜು ಬಾಬಾ ಬಿಡುಗಡೆಯಾಗುತ್ತಿದ್ದಾರೆ.