
ಛತ್ತೀಸ್ ಗಢ: ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನ, ಬಯಲು ಶೌಚ ಮುಕ್ತ ಭಾರತಕ್ಕೆ ಕರೆ ನೀಡಿದ ನಂತರ ಅನೇಕರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಛತ್ತೀಸ್ ಗಢದಲ್ಲಿ 104 ವರ್ಷದ ವೃದ್ಧೆಯೊಬ್ಬರು ತಮ್ಮ ಬಳಿ ಇದ್ದ 8 -10 ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಿಸಿದ್ದಾರೆ.
ಛತ್ತೀಸ್ಗಢದಲ್ಲಿ ರುರ್ಬನ್ ಮಿಷನ್ ಯೋಜನೆಗೆ ಚಾಲನೆ ನೀಡಿದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮೇಕೆಗಳನ್ನು ಮಾರಿ ಶೌಚ ಗೃಹ ನಿರ್ಮಿಸಿದ ಧಮ್ತರಿ ಜಿಲ್ಲೆಯ 104 ವರ್ಷದ ಕುನ್ವರ್ ಬಾಯಿ ಅವರನ್ನು ವಿಶೇಷವಾಗಿ ಅಭಿನಂದಿಸಿದರು.
ಮೇಕೆಗಳನ್ನು ಮಾರಾಟ ಮಾಡಿ ಶೌಚಗೃಹ ನಿರ್ಮಿಸಿದ್ದಕ್ಕೆ ಅಭಿನಂದಿಸುವುದಷ್ಟೇ ಅಲ್ಲದೇ ಪ್ರಧಾನಿ ಮೋದಿ ಕುನ್ವರ್ ಬಾಯಿ ಅವರ ಪಾದಕ್ಕೆರಗಿ ಅವರ ಆಶೀರ್ವಾದ ಪಡೆದರು. ಧಮ್ತರಿ ಜಿಲ್ಲೆಯ ಕೊಟ್ಟಭರಿ ಗ್ರಾಮದ ಕುನ್ವರ್ ಬಾಯಿ ತಮ್ಮ ಬಳಿ ಇದ್ದ ಮೇಕೆಯನ್ನು ಮಾರಿ ಶೌಚಗೃಹ ನಿರ್ಮಿಸಿಕೊಂಡಿರುವುದು ಭಾರತ ಬದಲಾಗುತ್ತಿದೆ ಎಂಬುದರ ಸಂಕೇತ. ಕುಗ್ರಾಮವೊಂದರ ವೃದ್ಧೆ ಸ್ವಚ್ಛ ಭಾರತಕ್ಕೆ ಕೈಜೋಡಿಸಿದ್ದು, ಅವರು ದೇಶದ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.
ಗ್ರಾಮಗಳಲ್ಲಿಯೂ ನಗರ ಸೌಲಭ್ಯಗಳನ್ನು ಕಲ್ಪಿಸಲು ಹಾಗೂ ಯುವಕರ ನಗರವಲಸೆ ತಡೆಯಲು ಶ್ಯಾಮಾಪ್ರಸಾದ್ ಮುಖರ್ಜಿ ರುರ್ಬನ್ ಮಿಷನ್ ಯೋಜನೆಯಡಿ ಮೂರು ವರ್ಷಗಳಲ್ಲಿ ಐದು ಸಾವಿರ ಕೋಟಿ ರೂ. ಅನುದಾನದಲ್ಲಿ 300 ಗ್ರಾಮಗಳ ಸಮೂಹ (ಕ್ಲಸ್ಟರ್)ಗಳನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.