ಕನ್ನಡ ವಾರ್ತೆಗಳು

ವೈದ್ಯರ ನಿರ್ಲಕ್ಷ್ಯ: ಬಾಣಂತಿ ಮಹಿಳೆ ಮೃತ್ಯು

Pinterest LinkedIn Tumblr

lady_died_delvery

ಮಂಗಳೂರು,ಫೆ 22 : ಮಗುವಿಗೆ ಜನ್ಮ ನೀಡಿದ ಬಳಿಕ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಯಲ್ಲಿ ನಡೆದಿದ್ದು, ವೈದ್ಯರ ನಿರ್ಲಕ್ಷ್ಯವೇ ಮಹಿಳೆ ಸಾವಿಗೆ ಕಾರಣ ಎಂದು ಆರೋಪಗಳು ಕೇಳಿಬಂದಿದೆ.

ಬಂಟ್ವಾಳ ವಗ್ಗ ನಿವಾಸಿ ಸುನಿಲ್ ಗಟ್ಟಿ ಎಂಬವರ ಪತ್ನಿ ಗೀತಾ ಸುನಿಲ್ ಗಟ್ಟಿ (28) ಸಾವನ್ನಪ್ಪಿದ ದುರ್ದೈವಿ.

ಕಳೆದ ಎರಡು ದಿನಗಳ ಹಿಂದೆ ಗೀತಾ ಅವರನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಂಟ್ವಾಳದ ಸೋಮಯಾಜಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಮಧ್ಯಾಹ್ನ 1 ಗಂಟೆಯ ವೇಳೆ ವಿಪರೀತವಾಗಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರು ಪ್ರಸವದ ಕೋಣೆಗೆ ಕೊಂಡೊಯ್ದಿದ್ದರು. ಅಲ್ಲಿ ಹೊಟ್ಟೆಯಲ್ಲಿ ಮಗು ತಿರುಗಿದೆ ಎಂದಷ್ಟೇ ತಿಳಿಸಿದ್ದರು. ಬಳಿಕ ಮನೆಮಂದಿ ಯಾವುದನ್ನೂ ಕೇಳಿದರೂ ಆಸ್ಪತ್ರೆ ಸಿಬ್ಬಂದಿ ಸುಮ್ಮನಿದ್ದರು.

ನಿರಂತರ 1 ಗಂಟೆಯಿಂದ 3 ಗಂಟೆಯವರೆಗೂ ಸುಮ್ಮನಿದ್ದ ಸಿಬ್ಬಂದಿ, ಬಳಿಕ ಬಟ್ಟೆ ಕೇಳಲು ಆರಂಭಿಸಿದ್ದಾರೆ. ಒಂದರ ಹಿಂದೆ ಮತ್ತೊಮ್ಮೆ ಬಟ್ಟೆ ಕೇಳುತ್ತಲೇ ಇದ್ದ ಸಿಬ್ಬಂದಿ ಕಾರಣ ಕೇಳಿದರೂ ಯಾವುದೇ ಉತ್ತರವನ್ನು ನೀಡುತ್ತಿರಲಿಲ್ಲ. ಕೊನೆಗೆ ಗೀತಾ ಅವರ ಸಂಬಂಧಿ ವೈದ್ಯರೋರ್ವರ ಕಾಲು ಹಿಡಿದು ವಿಚಾರ ಕೇಳಿದಾಗ, ‘ನೀವು ನೋಡಬೇಕೆಂದು ಇದ್ದರೆ, ಒಮ್ಮೆ ಒಳಗೆ ಹೋಗಿ ನೋಡಿ’ ಎಂದು ಹೇಳಿದ್ದರು. ಆದರೆ ಮನೆಮಂದಿ ಒಳಗೆ ತೆರಳುವಾಗ ಗೀತಾ ಅವರಿಗೆ ವಿಪರೀತ ರಕ್ತಸ್ರಾವ ಆಗುತ್ತಿದ್ದು, ಕೊಟ್ಟ ಬಟ್ಟೆಗಳಲ್ಲಿ ತುಂಬಾ ರಕ್ತವನ್ನು ಒರೆಸಲಾಗಿತ್ತು. ೫ ಗಂಟೆಯ ಹೊತ್ತಿಗೆ ರಕ್ತ ತರಲು ಹೇಳಿದ ಆಸ್ಪತ್ರೆ ಸಿಬ್ಬಂದಿ ಬಳಿಕ ಗೀತಾ ಅವರ ಆರೋಗ್ಯ ಚಿಂತಾಜನಕವಾಗಿದ್ದು, ಕೂಡಲೇ ಮಂಗಳೂರಿಗೆ ಕೊಂಡೊಯ್ಯಿರಿ ’ ಎಂದು ತಿಳಿಸಿದ್ದಾರೆ.

ಗಾಬರಿಗೊಂಡ ಮನೆಮಂದಿ ಆಂಬ್ಯುಲೆನ್ಸ್‌ನಲ್ಲಿ ಕೊಂಡೊಯ್ಯುವ ಸಂದರ್ಭದಲ್ಲೂ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಹಾಗೇ ಕಳುಹಿಸಿದ್ದಾರೆ. ಇದರಿಂದ ಬಿ.ಸಿ.ರೋಡಿನಿಂದ ಮಂಗಳೂರಿಗೆ ಸಾಗಿಸುವ ವೇಳೆಯೂ ವಿಪರೀತವಾಗಿ ರಕ್ತಸ್ರಾವ ಉಂಟಾಗಿದೆ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕೊಂಡೊಯ್ದಾಗ ಅಲ್ಲಿಯೂ ಐಸಿಯುವಿನ ಕೊರತೆ ಇದ್ದುದರಿಂದ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಲಾಯಿತು.

ಅಲ್ಲಿ ತಡರಾತ್ರಿಯಾದರೂ ಉತ್ತಮ ರೀತಿಯಲ್ಲಿ ಸ್ಪಂಧಿಸಿದ ಸಿಬ್ಬಂದಿ ರಕ್ತದ ಬಾಟಲಿಗಳನ್ನು ಕ್ಷಣದಲ್ಲೇ ತಂದರಾದರೂ ಆ ವೇಳೆಗಾಗಲೇ ಗೀತಾ ಅವರು ಕೊನೆಯುಸಿರೆಳೆದಿದ್ದಾರೆ. ಮೃತರು ಪತಿ ಹಾಗೂ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ

Write A Comment