ಕನ್ನಡ ವಾರ್ತೆಗಳು

ಜಿಪಂ-ತಾಪಂ ಚುನಾವಣೆ : ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ : ದ.ಕನ್ನಡದಲ್ಲಿ ಶೇ.69 ಮತದಾನ

Pinterest LinkedIn Tumblr

Election_Complite_1

ಮಂಗಳೂರು,ಫೆ.21: ತಾಲೂಕಿನ 10 ಜಿಪಂ ಮತ್ತು 39 ತಾಪಂ ಕ್ಷೇತ್ರಗಳಿಗೆ ಶನಿವಾರ ಶಾಂತಿಯುತ ಮತದಾನ ನಡೆದಿದ್ದು, ಶೇ. 65.54 ಮತದಾನವಾಗಿದೆ. ವಿವಿಧೆಡೆ ಬೆಳಗ್ಗಿನಿಂದ ನಿಧಾನಗತಿಯಲ್ಲಿ ಮತದಾನ ಪ್ರಕ್ರಿಯೆ ಕಂಡು ಬಂತು. ಜಿಪಂಗೆ 2010ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 6 ಮತ್ತು ಕಾಂಗ್ರೆಸ್ 4 ಸ್ಥಾನವನ್ನು ಪಡೆದುಕೊಂಡಿತ್ತು. 2010ರಲ್ಲಿ 37 ತಾಪಂ ಕ್ಷೇತ್ರಗಳಿದ್ದರೆ ಕ್ಷೇತ್ರ ಪುನರ್ವಿಂಗಡಣೆಯ ಬಳಿಕ ಈ ಬಾರಿ 39 ಕ್ಷೇತ್ರಗಳಿಗೆ ಚುನಾವಣೆ ನಡೆದಿದೆ.

2010ರಲ್ಲಿ 37 ಕ್ಷೇತ್ರಗಳಲ್ಲಿ ಬಿಜೆಪಿ 19 ಮತ್ತು ಕಾಂಗ್ರೆಸ್ 18 ಸ್ಥಾನಗಳನ್ನು ಗಳಿಸಿಕೊಂಡಿತ್ತು. ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದರೂ ಕೆಲವೆಡೆ ಮತಯಂತ್ರದ ದೋಷದಿಂದ ಚುನಾವಣೆ ನಿಗದಿತ ಸಮಯಕ್ಕೆ ಆರಂಭವಾಗಲಿಲ್ಲ. ಕಟೀಲು ಜಿಪಂ ಕ್ಷೇತ್ರದ ನಡುಗೋಡು ಬೂತ್ ಸಂಖ್ಯೆ 117ರಲ್ಲಿ ಮತ್ತು ಕುಪ್ಪೆಪದವು ತಾಪಂ ಕ್ಷೇತ್ರ ವ್ಯಾಪ್ತಿಯ ಕಲ್ಲಾಡಿ ಬೂತ್ ನಂ.188ರಲ್ಲಿ ಮತಯಂತ್ರ ದೋಷದಿಂದ ಚುನಾವಣೆ ವಿಳಂಬವಾಗಿ ಆರಂಭವಾಯಿತು. ಅಡ್ಯಾರ್‌ನಲ್ಲಿ ಮತಯಂತ್ರದ ದೋಷದಿಂದ ಅರ್ಧ ಗಂಟೆ ವಿಳಂಬವಾಗಿ ಮತದಾನ ನಡೆಯಿತು.

Election_Complite_2 Election_Complite_3 Election_Complite_4

ಸುಳ್ಯ ತಾಪಂ ಜಿಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಅತ್ಯಧಿಕ ಅಂದರೆ ಶೇ. 74.40 ಮತದಾನವಾಗಿದೆ.ಸೋಣಂಗೇರಿ ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿಯೊಬ್ಬರು ಮತದಾನಕ್ಕೆ ಬರುತ್ತಿದ್ದ ಮತದಾರರಿಗೆ ಒಂದು ನಂಬರಿಗೆ ಮತದಾನ ಮಾಡುವಂತೆ ಸೂಚನೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತಗಟ್ಟೆಗೆ ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಅಧಿಕಾರಿ ಮತಯಂತ್ರದ ಬಳಿಯೇ ಕೂತು ನಂಬರ್ ಸೂಚಿಸುತ್ತಿದ್ದರು ಎಂದು ಜಿಪಂ ಮಾಜಿ ಸದಸ್ಯ ಚಂದ್ರಶೇಖರ್ ಕಾಮತ್ ಆರೋಪಿಸಿದರು. ಅವರೊಂದಿಗೆ ಶಿವಕುಮಾರ್ ಆಗಮಿಸಿ ಅಧಿಕಾರಿಯನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದರು. ವಿಷಯ ತಿಳಿದ ಸುಳ್ಯ ಎಸ್ಸೈ ಚಂದ್ರಶೇಖರ್ ಮತ್ತು ಚುನಾವಣಾಧಿಕಾರಿ ಅರುಣಾ ಪ್ರಭಾ ಸ್ಥಳಕ್ಕೆ ಆಗಮಿಸಿ ಅಧಿಕಾರಿಗಳನ್ನು ಮತಯಂತ್ರದಿಂದ ದೂರ ಕುಳ್ಳಿರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

Election_Complite_5 Election_Complite_6

ಮತದಾನ ಕೇಂದ್ರದೊಳಗೆ ಪಕ್ಷದ ಏಜೆಂಟರ ಕೈಯಲ್ಲಿದ್ದ ಮೊಬೈಲುಗಳನ್ನು ಚುನಾವಣಾಧಿಕಾರಿಗಳು ವಶಪಡಿಸಿಕೊಂಡ ಘಟನೆಯು ನಡೆಯಿತು. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಹಾಗೂ ಚುನಾವಣಾ ಬಹಿಷ್ಕಾರಕ್ಕೆ ಕರೆ ನೀಡಿದ್ದ ಪೈಂಬೆಚ್ಚಾಲ್ ಮತಗಟ್ಟೆಯಲ್ಲಿ ಕನಿಷ್ಠ ಮತದಾನವಾಗಿದೆ. ಬೆಳ್ಳಾರೆ, ನಾರ್ಣಕಜೆ, ಕೊಲ್ಲಮೊಗ್ರ, ನಾರ್ಕೋಡು, ಅಮೈ ಮಡಿಯಾರು, ದೇವಚಳ್ಳ ಮೊದಲಾದ ಕಡೆ ಮತಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಮತದಾನ ವಿಳಂಬ ಆಗಿದೆ.

ಪುತ್ತೂರು:ಶೇ.71.47 ಮತದಾನ

ಪುತ್ತೂರು ತಾಲೂಕಿನ 193 ಮತಗಟ್ಟೆಯ ಕೆಲವು ಕಡೆ ಮತಯಂತ್ರ ಕೈಕೊಟ್ಟರೂ ಶೇ. 71.47 ಮತದಾನದೊಂದಿಗೆ ಶಾಂತಿಯುತ ಚುನಾವಣೆ ನಡೆಯಿತು. ಸಂಜೆಯ ವೇಳೆಗೆ ಆರ್ಯಾಪು ಗ್ರಾಮದ ಕುಂಜೂರುಪಂಜ ಮತಗಟ್ಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಸಣ್ಣ ಪುಟ್ಟ ಹೊಕೈ ನಡೆದಿದ್ದು, ಉಳಿದೆಡೆ ಎಲ್ಲಿಯೂ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಹಲವು ಮತಗಟ್ಟೆಗಳಲ್ಲಿ ಮತಯಂತ್ರಗಳ ತೊಂದರೆ ಯಿಂದಾಗಿ ಮತದಾನ ವಿಳಂಬ ಗೊಂಡಿತು.

ತಾಲೂಕಿನ ಚಾರ್ವಾಕ ಮತಗಟ್ಟೆಯಲ್ಲಿ ನೋಟಾ ಓಟು ಚಲಾಯಿಸುವಂತೆ ಮನವಿ ಮಾಡುತ್ತಿರುವ ದೃಶ್ಯವೂ ಕಂಡು ಬಂತು. ಮತಯಂತ್ರ, ಶಾಯಿ ಹಾಕುವ ಗೊಂದಲ, ಬೆಳಕಿನ ವ್ಯವಸ್ಥೆ ಇಲ್ಲದಿರುವುದು ಇಂತಹ ಸಣ್ಣ ಸಮಸ್ಯೆಗಳಿಂದ ಸಿಬ್ಬಂದಿ ಗೊಂದಲಕ್ಕೆ ಒಳಗಾಗಬೇಕಾಯಿತು. ಮತದಾರ ಬಾಗಿಲ ಬಳಿಯಲ್ಲೇ ಕಾಯುವಂತಾಯಿತು. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆಹರಿಸಿದರು. ಬಳಿಕ ಮತದಾನ ಸರಾಗವಾಗಿ ನಡೆಯಿತು.

Election_Complite_7 Election_Complite_8

ತಾಲೂಕಿನ ಹಂಟ್ಯಾರು, ಈಶ್ವರ ಮಂಗಲ, ನೆಟ್ಟಣಿಗೆ, ಅರಿಯಡ್ಕ, ಬನ್ನೂರು, ಆರ್ಯಾಪು ಮತದಾನ ಕೇಂದ್ರಗಳಲ್ಲಿನ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಸುಗಮ ಮತದಾನಕ್ಕೆ ಕೆಲ ಕಾಲ ಅಡ್ಡಿಯಾಯಿತು.

ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದಿದ್ದ ಇಬ್ರಾಹೀಂ ಎಂಬವರು ಬಲಗೈಯ ಬದಲು ಎಡಗೈಯ ಹೆಬ್ಬೆರಳಿಗೆ ಶಾಯಿ ಗುರುತು ಹಚ್ಚುವಂತೆ ಪಟ್ಟು ಹಿಡಿದು ‘ಎರಡೂ ಕೈಗಳೂ ನನ್ನದ್ದೇ… ನಾನು ಹೇಳಿದ ಕೈಯ ಬೆರಳಿಗೆ ಶಾಯಿ ಗುರುತು ಹಾಕಲು ಆಗುವುದಿಲ್ಲ ಎಂದಾದಲ್ಲಿ ಮತದಾನ ಮಾಡುವುದಿಲ್ಲ’ ಎನ್ನುತ್ತಾ ಮತ ಚಲಾಯಿಸದೆ ಮತಗಟ್ಟೆಯಿಂದ ಹೊರ ನಡೆದರೆಂದು ತಿಳಿದು ಬಂದಿದೆ. ನೋಟಾ ಪರ ಮನವಿ: ನೋಟಾ ಪರ ಹಕ್ಕು ಚಲಾಯಿಸುವಂತೆ ಮತದಾರರ ಬಳಿ ಮನವಿ ಮಾಡುತ್ತಿದ್ದ ಘಟನೆ ಚಾರ್ವಾಕ ಹಿ.ಪ್ರಾ. ಶಾಲಾ ಮತಗಟ್ಟೆ ಬಳಿ ಕಂಡುಬಂತು.

ಕುಂಜೂರು ಪಂಜದಲ್ಲಿ ಹೊಕೈ: ಆರ್ಯಾಪು ಗ್ರಾಮದ ಕುಂಜೂರು ಪಂಜ ಶಾಲೆಯ ಮತಕೇಂದ್ರದ ಬಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಂಜೆ ವೇಳೆಗೆ ಸಣ್ಣ ಮಟ್ಟಿನ ಹೊಕೈ ನಡೆಯಿತು. ಕಾಂಗ್ರೆಸ್ ಅಭ್ಯರ್ಥಿ ಮಹಾಬಲ ರೈ, ಆತನ ಸಹೋದರ ಜಗನ್ನಾಥ ರೈ, ಪಕ್ಷದ ಕಾರ್ಯಕರ್ತ ಪುರುಷೋತ್ತಮ ಮತ್ತು ಸನತ್ ಹಾಗೂ ಬಿಜೆಪಿ ಬೆಂಬಲಿತ ಶಿವಪ್ಪನಾಯ್ಕರ ನಡುವೆ ಹೊಕೈ ನಡೆಯಿತು.

Election_Complite_9 Election_Complite_10

ಬಂಟ್ವಾಳ: ಶೇ.71.69 ಮತದಾನ

ಬಂಟ್ವಾಳ ತಾಲೂಕಿನ 9 ಜಿಪಂ ಹಾಗೂ 34 ತಾಪಂ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕೆಲವೊಂದು ಸಣ್ಣಪುಟ್ಟ ಘಟನೆಗಳ ಹೊರತುಪಡಿಸಿದಂತೆ ಸಂಪೂರ್ಣ ಶಾಂತಯುತವಾಗಿ ನಡೆದಿದ್ದು, ಶೇ 71.69 ಮತದಾನವಾಗಿದೆ. ಕೆಲವೊಂದು ಮತಗಟ್ಟೆ ಬಳಿ ರಾಜಕೀಯ ಪಕ್ಷಗಳ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯೆ ಪ್ರವೇಶದಿಂದ ತಿಳಿಯಾಗಿದೆ.

ತಾಲೂಕಿನ ಮುಲ್ಲರ ಪಟ್ನ, ಮಾಣಿ ಸೇರಿದಂತೆ ನಾಲ್ಕು ಮತಗಟ್ಟೆಗಳಲ್ಲಿ ಬೆಳಗ್ಗೆ ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಕೆಲಹೊತ್ತು ಮತದಾನ ಪ್ರಕಿಯೆ ಸ್ಥಗಿತಗೊಂಡಿತ್ತು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಕಳ್ಳಿಗೆ ಗ್ರಾಮದ ತೊಡಂಬಿಲ ಸರಕಾರಿ ಶಾಲೆಯಲ್ಲಿ ತನ್ನ ಹಕ್ಕನ್ನು ಚಲಾಯಿಸಿದರು. ಮಾಜಿ ಶಾಸಕ, ಸಜಿಪಮುನ್ನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಹಾಗೂ ಕೊಳ್ನಾಡು ಬಿಜೆಪಿ ಅಭ್ಯರ್ಥಿ ಮುಸ್ತಫಾ ಜೊತೆಯಾಗಿ ಬಂದು ಗೊಳ್ತಮಜಲು ಗ್ರಾಪಂ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಬೋಳಂತ್ತೂರು-ನರಿಕೊಂಬು ರಸ್ತೆಯು ಹದಗೆಟ್ಟ ಹಿನ್ನೆಲೆಯಲ್ಲಿ ಸ್ಥಳೀಯರು ಮತದಾನವನ್ನು ಬಹಿಷ್ಕರಿಸಲು ನಿರ್ಧರಿಸಿದ್ದರು. ಈ ಭಾಗದ ಎರಡು ಬೂತುಗಳ ಪೈಕಿ ಒಂದು ಬೂತಿಗೊಳಪಟ್ಟ ಮತದಾರರು ಮತದಾನಗೈದಿದ್ದರೆ, ಮತ್ತೊಂದು ಬೂತಿನ ಕೆಲ ಮತದಾರರು ಮತದಾನವನ್ನು ಬಹಿಷ್ಕರಿಸಿದ್ದರು. ಮತ ಚಲಾಯಿಸಲು ಬೂತಿಗೆ ತೆರಳುತ್ತಿದ್ದಾಗ ಕೆಲವರು ತಡೆ ಹಿಡಿದು ಅಡ್ಡಿ ಪಡಿಸಿದ ಘಟನೆಯೂ ನಡೆದಿದೆ.

Election_Complite_11 Election_Complite_12

ಕಡಬ ಪರಿಸರದ ಕೊಲ, ರಾಮಕುಂಜ, ಆಲಂಕಾರು, ಪೆರಾಬೆ, ಕುಂತೂರು, ಕೋಡಿಂಬಾಳ, ಕಡಬ, ಕುಟ್ರುಪ್ಪಾಡಿ, ಕೊಂಬಾರು, ಕೊಣಾಜೆ ಮೊದಲಾದ ಗ್ರಾಮಗಳ ಹಲವು ಕಡೆ ಮತಯಂತ್ರದಲ್ಲಿ ದೋಷ ಕಂಡು ಬಂದ ಹೊರತಾಗಿಯೂ ಮತದಾರರು ಸಾಲುಗಟ್ಟಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಕುಟ್ರುಪ್ಪಾಡಿ ಗ್ರಾಮದ ಸರಕಾರಿ ಶಾಲಾ ಮತಗಟ್ಟೆಯಲ್ಲಿ ಮತಯಂತ್ರವನ್ನು ಅದಲು ಬದಲಿಟ್ಟ ಕಾರಣ ಕೆಲಕಾಲ ಗೊಂದಲ ಉಂಟಾಯಿತು.

ಮರ್ದಾಳದಿಂದ ಕೆರ್ಮಾಯಿಗೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಯಾಗಿಲ್ಲ ಎಂದು ನಾಗರಿಕರು ಮತದಾನ ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದರು. ಶನಿವಾರ ಬಿಜೆಪಿ ಮಖಂಡ ಸೀತಾರಾಮ ಗೌಡ ಈ ರಸ್ತೆಗೆ ಮಣ್ಣು ಹಾಕಿಸುತ್ತಿದ್ದಾರೆಂದು ಆರೋಪಿಸಿ ಜೆಡಿಎಸ್ ಅಭ್ಯರ್ಥಿ ಸೈಯದ್ ಮೀರಾ ಸಾಹೇಬರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾಮಗಾರಿಯನ್ನು ಸ್ಥಗಿತಗೊಳಿದರು.

Election_Complite_13 Election_Complite_14

ಹೋಬಳಿ ವ್ಯಾಪ್ತಿಯ ಕಿನ್ನಿಗೋಳಿ ಮತ್ತು ಕಟೀಲು ಜಿಪಂ ಕ್ಷೇತ್ರದ ಕೆಲವು ಕಡೆಗಳಲ್ಲಿ ಮತಯಂತ್ರಗಳು ಕೈಕೊಟ್ಟ ಪರಿಣಾಮ ಮತದಾರರು ಕೆಲಕಾಲ ಕಾದು ಹಿಂದಿರುಗಿದ ಘಟನೆಯ ನಡುವೆಯೂ ಜನತೆ ತಮ್ಮ ಹಕ್ಕುಗಳನ್ನು ಚಲಾಯಿಸಿದರು.

ಬೆಳಗ್ಗಿನಿಂದಲೇ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನವಾಗುತ್ತಲೇ ಆಮೆಗತಿಗೆ ತಲುಪಿ ಮತಗಟ್ಟೆಗಳು ಖಾಲಿಯಾಗಿದ್ದವು. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.

ಕಟೀಲು ಜಿಪಂ ವ್ಯಾಪ್ತಿಯ ನಡುಗೋಡು ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗುತ್ತಲೇ ಮತಯಂತ್ರ ಕೈಕೊಟ್ಟ ಪರಿಣಾಮ ಚುನಾವಣಾಧಿಕಾರಿ ಗಲಿಬಿಲಿಗೊಂಡರು. ಬಳಿಕ ತಹಶೀಲ್ದಾರ್‌ರ ಸಮ್ಮುಖ ಮತಯಂತ್ರ ಬದಲಿಸಲಾಯಿತು. ಸುಮಾರು ಒಂದುವರೆ ಗಂಟೆ ಕಾದು ಕುಳಿತ 50 ಮಂದಿ ಮತದಾರರು ಚುನಾವಣಾಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕಿನ್ನಿಗೋಳಿ ಜಿಪಂ ವ್ಯಾಪ್ತಿಯ ಪಂಜ, ಏಳಿಂಜೆಯಲ್ಲೂ ಮತದಾನ ಪ್ರಕ್ರಿಯೆ ವಿಳಂಬವಾಯಿತು.

ಹಿರಿಯರಿಂದ ಮತದಾನ: ಸುಮಾರು 108 ವರ್ಷ ಪ್ರಾಯದ ಜೋಸೆಫ್ ಮೆನೇಜಸ್ ತನ್ನ ಕುಟುಂಬಿಕರೊಂದಿಗೆ ಬಳ್ಕುಂಜೆ ಮತದಾನ ಕೇಂದ್ರದಲ್ಲಿ ಹಕ್ಕನ್ನು ಚಲಾಯಿಸಿದರು.90 ವರ್ಷ ಪ್ರಾಯದ ಚಂದ್ರಯ್ಯ ಮಡಿವಾಳ ಹಾಗೂ ಹಳೆಯಂಗಡಿ ಪರಿಸರದ 90 ವರ್ಷ ಪ್ರಾಯದ ಝುಲೈಕಾ ಎಂಬವರು ಮೊಮ್ಮಕ್ಕಳ ಸಹಾಯದೊಂದಿಗೆ ಮತ ಚಲಾಯಿಸಿದರು.

Election_Complite_15

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು ಕಾಣೆ: ಕಳೆದ ಗ್ರಾಪಂ ಚುನಾವಣೆಯ ವೇಳೆ ಮುಲ್ಕಿ ಹೋಬಳಿಯ ಕೆಲವೊಂದು ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು ಎಂದು ಘೋಷಿಸಿದ್ದ ಜಿಲ್ಲಾಡಳಿತ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಬಿಗಿ ಭದ್ರತೆ ಒದಗಿಸಿತ್ತು. ಆದರೆ ಇಂದಿನ ಚುನಾವಣೆಯ ವೇಳೆ ಅಂತಹ ಚಿತ್ರಣ ಕಂಡುಬರಲಿಲ್ಲ.

ಬೆಳ್ತಂಗಡಿ:ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.66.73 ಮತದಾನವಾಗಿದೆ. ಯಾವುದೇ ಪ್ರದೇಶದಲ್ಲಿ ಅಹಿತಕರ ಘಟನೆಗಳು ವರದಿ ಆಗಿಲ್ಲ. ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಕ್ಷೇತ್ರಗಳಲ್ಲಿ ಎಎನ್‌ಎಫ್ ಪಡೆಗಳನ್ನು ನಿಯೋಜಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಕೇಂದ್ರದತ್ತ ಬರುತ್ತಿದ್ದುದು ಕಂಡು ಬಂತು. ಮುಂಡಾಜೆ ಮತ್ತು ಕಲ್ಮಂಜ ಗ್ರಾಮಗಳಲ್ಲಿ ಚುನಾವಣಾ ಬಹಿಷ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ಕಂಡು ಬಂತು. ಮತದಾನಕ್ಕಾಗಿ ಜನರನ್ನು ಸಾಗಿಸುತ್ತಿದ್ದ ವಾಹನಗಳನ್ನು ತಡೆದು ಮತದಾನಕ್ಕೆ ತೆರಳದಂತೆ ತಡೆ ಒಡ್ಡಿದ್ದರು.

ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಮತದಾನಕ್ಕೆ ಅವಕಾಶ ಕಲ್ಪಿಸಿದರು. ಕಳಿಯ ತಾಪಂ ಕ್ಷೇತ್ರದ ಗೇರುಕಟ್ಟೆ ಕೊರಂಜ ಶಾಲೆಯ 1ನೇ ವಾರ್ಡ್‌ನಲ್ಲಿ ಮತದಾರರಿಗೆ ಎಡ ಕೈ ಹೆಬ್ಬೆರಳಿಗೆ ಶಾಯಿಯನ್ನು ಹಾಕುತ್ತಿದ್ದರು. ಬೆಳಗ್ಗೆ 9:30ರವರೆಗೂ ಇದೇ ರೀತಿ ಮುಂದುವರೆದಿತ್ತು. ಬಳಿಕ ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದಾಗ ಬಳಿಕ ಬಲಕೈ ಹೆಬ್ಬೆರಳಿಗೆ ಶಾಯಿಯನ್ನು ಹಾಕತೊಡಗಿದರು.

Write A Comment