
ನವದೆಹಲಿ: ದೇಶದ್ರೋಹದ ಆರೋಪದಡಿಯಲ್ಲಿ ಬಂಧಿತನಾಗಿರುವ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹೈಯ್ಯ ಕುಮಾರ್ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ.
ನಿನ್ನೆ ರಾತ್ರಿ ಸುಮಾರು 8.40ಕ್ಕೆ ಕನ್ಹೈಯ್ಯ ಅಕೌಂಟ್ ಹ್ಯಾಕ್ ಮಾಡಿ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿಯುತ್ತಿರುವ ಸೈನಿಕರ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಆಗಿ ಬದಲಾಯಿಸಲಾಗಿದೆ. ಈ ಫೋಟೋ ಹಾಕಿದ ಒಂದು ಗಂಟೆಯೊಳಗೆ ಚಿತ್ರಕ್ಕೆ 600 ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ.
ಕನ್ಹೈಯ್ಯ ಬಿಡುಗಡೆಗಾಗಿ ಒತ್ತಯಿಸುತ್ತಿರುವ ವಿದ್ಯಾರ್ಥಿಗಳು, ಅಕೌಂಟನ್ನು ಉದ್ದೇಶಪೂರ್ವಕವಾಗಿ ಹ್ಯಾಕ್ ಮಾಡಲಾಗಿದೆ. ಈ ಬಗ್ಗೆ ದೆಹಲಿ ಸೈಬರ್ ಪೊಲೀಸರಿಗೆ ದೂರು ನೀಡುತ್ತೇವೆ ಎಂದಿದ್ದಾರೆ.
ದೆಹಲಿಯ ಜವಹರ್ ಲಾಲ್ ನೆಹರು ವಿವಿಯಲ್ಲಿ ಸಂಸತ್ ದಾಳಿಯ ರೂವಾರಿ ಅಫ್ಜಲ್ ಗುರು ಪರ ಘೋಷಣೆ ಕೂಗಿ ದೇಶದ್ರೋಹದ ಆರೋಪದ ಮೇಲೆ ಬಂಧಿತನಾಗಿರುವ ಕನ್ಹೈಯ್ಯ ಕುಮಾರ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.