ಆಲಿಘಡ: ಆಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಜವಹರಲಾಲ್ ನೆಹರೂ ವೈದ್ಯಕೀಯ ಕಾಲೇಜಿನ ಕ್ಯಾಂಟೀನ್ ನಲ್ಲಿ ಗೋಮಾಂಸದ ಬಿರಿಯಾನಿ ವಿತರಿಸುವುದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ನಾಯಕರು ಪೊಲೀಸರನ್ನು ಆಗ್ರಹಿಸಿದ್ದಾರೆ.
ಆಲಿಘಡ್ ನಗರದ ಮೇಯರ್ ನೇತೃತ್ವದಲ್ಲಿ ಸ್ಥಳೀಯ ಬಿಜೆಪಿ ನಾಯಕರು ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿ ತಮ್ಮ ಆರೋಪಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬಿಜೆಪಿ ನಾಯಕರ ಆರೋಪವನ್ನು ವಿಶ್ವವಿದ್ಯಾಲಯ ಅಲ್ಲಗಳೆದಿದ್ದು, ಕ್ಯಾಂಟೀನ್ ನಲ್ಲಿ ತಯಾರಿಸಲಾಗುವ ಬಿರಿಯಾನಿಗೆ ಕೋಣದ ಮಾಂಸವನ್ನು ಮಾತ್ರ ಸೇರಿಸಲಾಗುತ್ತದೆ ಎಂದು ಹೇಳಿದೆ.
” ಗೋಮಾಂಸವನ್ನು ಕ್ಯಾಂಟೀನ್ ನಲ್ಲಿ ನೀಡುತ್ತಿಲ್ಲ. ಅದು ಕೋಣದ ಮಾಂಸವಾಗಿದೆ. ಗೋಮಾಂಸವನ್ನು ವಿಶ್ವವಿದ್ಯಾಲಯದಲ್ಲಿ 1884ರಲ್ಲಿ ವಿದ್ಯಾಲಯದ ಸ್ಥಾಪಕ ಸರ್ ಸೈಯದ್ ಅಹ್ಮದ್ ಖಾನ್ ಅವರ ಅವಧಿಯಲ್ಲಿಯೇ ನಿಷೇಧಿಸಲಾಗಿದೆ. ಮುಸಲ್ಮಾನರು ಬಕ್ರೀದ್ ಆಚರಣೆ ಸಂದರ್ಭದಲ್ಲಿ ಕೂಡ ಗೋವುಗಳನ್ನು ಕೊಲ್ಲುವುದು ಹಾಗೂ ಗೋಮಾಂಸ ಸೇವನೆಯಿಂದ ದೂರವಿರಬೇಕೆಂದು ಮನವಿ ಮಾಡುತ್ತಿದ್ದರು. ಬರೇಲಿಯ ಮುಸ್ಲಿಮರು ಅವರ ಸಲಹೆಗಳನ್ನು ಪಾಲಿಸಿದಾಗ ಅವರಿಗೆ ಖುಷಿಯಾಗುತ್ತಿತ್ತು ಎಂದು ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಆದರೆ ಆಲಿಘಡ ನಗರದ ಮೇಯರ್ ಬಿಜೆಪಿಯ ಶಕುಂತಲಾ ಬಾರ್ತಿ ಹೇಳುವ ಪ್ರಕಾರ, ಬಿರಿಯಾಲಿಯಲ್ಲಿ ದನದ ಮಾಂಸವಿರುತ್ತದೆ. ಕ್ಯಾಂಟೀನ್ ನ ಮೆನು ಪಟ್ಟಿಯಲ್ಲಿ ಪ್ರತ್ಯೇಕವಾಗಿ ಬೀಫ್ ಬಿರಿಯಾನಿ ಅಂತಲೇ ನಮೂದಿಸಿದ್ದಾರೆ. ಹಾಗಾಗಿ ನಾವು ಎಸ್ಪಿಯವರಿಗೆ ದೂರು ಸಲ್ಲಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇವೆ. ಗೋಮಾಂಸ ಮತ್ತು ದನಗಳನ್ನು ಕಡಿಯುವುದನ್ನು ನಿಷೇಧಿಸಿರುವಾಗ ವಿಶ್ವವಿದ್ಯಾಲಯದ ಕ್ಯಾಂಟೀನ್ ನಲ್ಲಿ ಹೇಗೆ ನೀಡುತ್ತಾರೆ? ಎಂದು ಮೇಯರ್ ಪ್ರಶ್ನಿಸುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ದೂರು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.