ರಾಷ್ಟ್ರೀಯ

ಆಮ್ ಆದ್ಮಿ ಪಕ್ಷದ ನೇತಾರೆ ಮೇಲೆ ಆ್ಯಸಿಡ್ ದಾಳಿ

Pinterest LinkedIn Tumblr

Soni_sori

ರಾಯ್‌ಪುರ್: ಛತ್ತೀಸ್‌ಗಢ್‌ದ ಆಮ್ ಆದ್ಮಿ ಪಕ್ಷದ ನೇತಾರೆ ಸೋನಿ ಸೋರಿ ಎಂಬವರ ಮೇಲೆ ಶನಿವಾರ ಆ್ಯಸಿಡ್ ದಾಳಿ ನಡೆದಿದೆ.

ಮಾವೋವಾದಿಗಳ ಪ್ರಾಬಲ್ಯವಿರುವ ದಾಂಟೇವಾಡ ಜಿಲ್ಲೆಯಲ್ಲಿ ಮೂವರು ಆಗಂತುಕರು ಸೋನಿ ಅವರ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ.

ಆದಿವಾಸಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಸೋನಿ, ನಂತರ ರಾಜಕಾರಣಿಯಾಗಿದ್ದರು. ಶನಿವಾರ ಬಂಜಾರಿನ್ ಘಾಟಿಯಿಂದ ಜಗ್ದಾಲ್‌ಪುರ್‌ಗೆ ಇಬ್ಬರು ಆಪ್ತರೊಂದಿಗೆ ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದ ವೇಳೆ ಜವಾಂಗ ಗ್ರಾಮದಲ್ಲಿ ಸೋನಿ ಅವರ ಮೇಲೆ ದಾಳಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಸ್ತಾನಗರ್‌ನಲ್ಲಿ ಹಾದುಹೋಗುತ್ತಿದ್ದಾಗ ಮೂವರು ಯುವಕರು ಸೋನಿ ಸಂಚರಿಸುತ್ತಿದ್ದ ವಾಹನವನ್ನು ನಿಲ್ಲಿಸಿ ಆ್ಯಸಿಡ್ ಎರಚಿದ್ದಾರೆ. ಸೋನಿ ಅವರನ್ನು ಕೂಡಲೇ ಗೀಡಂ ಆಸ್ಪತ್ರೆಗೆ ಸಾಗಿಸಿ, ನಂತರ ಪೊಲೀಸರಿಗೆ ಮಾಹಿತಿ ತಿಳಿಸಲಾಗಿತ್ತು.

ವೈದ್ಯರ ಪ್ರಕಾರ, ಕೆಮಿಕಲ್‌ನೊಂದಿಗೆ ಗ್ರೀಸ್ ಬೆರೆಸಿ ಸೋನಿ ಅವರ ಮುಖಕ್ಕೆ ಎರಚಲಾಗಿತ್ತು. ಮುಖ ಸುಟ್ಟು ಹೋಗಿದ್ದು, ಅವರನ್ನು ಜುಗ್ದಾಲ್‌ಪುರ್ ಆಸ್ಪತ್ರೆಗೆ ಸಾಗಿಸಿ, ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಲ್ಲಮೂಲಗಳು ಹೇಳಿವೆ.

ಸೋನಿ ಅವರಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿದೆ ಎಂದು ಆರೋಪಿಸಿ ಛತ್ತೀಸ್‌ಗಢ್ ಪೊಲೀಸರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು. ಈ ಕಿರುಕುಳ ಸಹಿಸಲಾರದೆ ಸೋನಿ ಆಮ್ ಆದ್ಮಿ ಪಕ್ಷಕ್ಕೆ ಸೇರಿ ರಾಜಕಾರಣಿಯಾಗಿದ್ದರು.

Write A Comment