ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯ ಮತಗಟ್ಟೆ ಕೇಂದ್ರ 329ರಲ್ಲಿ ಶನಿವಾರ ಮಧ್ಯಾಹ್ನ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಅವರು, ‘ಬಹುತೇಕ ಜಿಲ್ಲೆಗಳಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದರು.
ಉಪಚುನಾವಣೆಯಲ್ಲಿನ ಹಿನ್ನಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ವಿಧಾನಸಭೆಯ ಉಪಚುನಾವಣೆಯೇ ಬೇರೆ, ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಬೇರೆ. ಉಪಚುನಾವಣೆಯ ಫಲಿತಾಂಶ ಸ್ಥಳೀಯ ಸಂಸ್ಥೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ’ ಎಂದು ಹೇಳಿದರು.
‘ಸರ್ಕಾರ ಸಾವಿರ ದಿನ ಪೂರೈಸಿದೆ. ಸರ್ಕಾರದ ಬಗ್ಗೆ ಸಾರ್ವಜನಿಕರಲ್ಲಿ ಯಾವ ರೀತಿಯ ಅಭಿಪ್ರಾಯವಿದೆ ಎಂಬುದು ಈ ಚುನಾವಣೆಯಲ್ಲಿ ಗೊತ್ತಾಗಲಿದೆ’ ಎಂದು ನುಡಿದರು.
ನಾಳೆ ಶಿಫಾರಸು: ಲೋಕಾಯುಕ್ತರ ಹುದ್ದೆಗೆ ಸಂಬಂಧಿಸಿದಂತೆ ಹೆಸರನ್ನು ನಾಳೆ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಮತಗಟ್ಟೆಯಲ್ಲಿ ಹಾವು…!
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ ಚಲಾಯಿಸುವ ಸ್ವಗ್ರಾಮ ಸಿದ್ದರಾಮನಹುಂಡಿಯ ಮತಗಟ್ಟೆ ಕೇಂದ್ರದಲ್ಲಿ ಶನಿವಾರ ಹಾವೊಂದು ಪ್ರತ್ಯೇಕ್ಷವಾಗಿ ಆತಂಕ ಸೃಷ್ಟಿಸಿತು.
ಬಿಸಿಲು ಹೆಚ್ಚಿದ್ದರಿಂದ ಇಲ್ಲಿ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆಗೆ ಜನರು ಬಿರುಸಿನಿಂದ ಬಂದು ಮತ ಚಲಾಯಿಸುತ್ತಿದ್ದರು. ಈ ಸಂದರ್ಭದಲ್ಲಿ ಕೆರೆ ಹಾವೊಂದು ಕಾಣಿಸಿಕೊಂಡಿದ್ದರಿಂದ ಮತದಾರರು ಗಲಿಬಿಲಿಗೊಂಡರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮತ ಚಲಾಯಿಸಲು ಇನ್ನೂ ಬಂದಿರಲಿಲ್ಲ. ತಕ್ಷಣವೇ ಅಲ್ಲಿನ ಸಿಬ್ಬಂದಿ ಹಾಗೂ ಪೊಲೀಸರು ಆ ಹಾವನ್ನು ಹೊಡೆದು ಹಾಕಿದರು. ಬಳಿಕ ಮತ ಚಲಾವಣೆ ಪ್ರಕ್ರಿಯೆ ಮುಂದುವರಿಯಿತು. ಸಿದ್ದರಾಮಯ್ಯ ಅವರು ಸ್ವಲ್ಪ ಹೊತ್ತಿನಲ್ಲಿಯೇ ಇಲ್ಲಿಗೆ ಬಂದು ಮತ ಚಲಾಯಿಸಲಿದ್ದಾರೆ.
ಮಧ್ಯಾಹ್ನ ವೇಳೆಗೆ ಶೇ 30 ಮತದಾನ
ಮೈಸೂರು: ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗೆ ಎರಡನೇ ಹಂತದಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬಿರುಸಿನಿಂದ ಮತದಾನ ನಡೆದಿದೆ.
ಆರಂಭದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಆದರೆ, ಬಿಸಿಲೇರುತ್ತಿದ್ದಂತೆ ಮತದಾನವೂ ಬಿರುಸುಗೊಂಡಿತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 30ರಷ್ಟು ಮತದಾನವಾಗಿತ್ತು. ಜಿಲ್ಲೆಯ 49 ಜಿ.ಪಂ ಹಾಗೂ 187 ತಾ.ಪಂಗಳಿಗೆ ಚುನಾವಣೆ ನಡೆಯಿತು. 920 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.