ಬೆಂಗಳೂರು: “ರೌಡಿ ಶೂಟೌಟ್ ಪ್ರಕರಣ’ದಲ್ಲಿ ಗುಂಡೇಟಿಗೆ ಬಲಿಯಾಗಿದ್ದ ಕಲಬುರ್ಗಿಯ ಸಬ್‌ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ (ಮಧು)ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಚಿಕಿತ್ಸಾ ವೆಚ್ಚ ಭರಿಸುವುದರ ಜತೆಗೆ ಬಂಡೆ ಹತ್ಯೆಯಾದ ಸಂದರ್ಭದಲ್ಲಿ ಘೋಷಿಸಿದ ಎಲ್ಲ ಪರಿಹಾರಗಳನ್ನೂ ಶೀಘ್ರ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದೆ. ಮಲ್ಲಮ್ಮ ಅವರು ಕಳೆದ ಎರಡೂವರೆ ತಿಂಗಳಿನಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಆ ಸಂಗತಿ ಬೆಳಕಿಗೆ ಬಂದಿರಲಿಲ್ಲ. ಆದರೆ, ಚಿಕಿತ್ಸಾ ವೆಚ್ಚ ಭರಿಸಲಾಗದೆ ಬಂಡೆ ಕುಟುಂಬ ತಮ್ಮ ಕುಟುಂಬದ ನೆರವಿಗೆ ಧಾವಿಸಬೇಕು ಮತ್ತು ಬಂಡೆ ಅವರ ಸಾವಿನ ಸಂದರ್ಭದಲ್ಲಿ ಘೋಷಿಸಲಾಗಿದ್ದ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಶುಕ್ರವಾರ ಇಡೀ ದಿನ ಪ್ರತಿಭಟನೆ ನಡೆಸಿದ ನಂತರ ಈ ಬಗ್ಗೆ ಎಚ್ಚೆತ್ತ ಸರ್ಕಾರ ತಕ್ಷಣ ನೆರವಿಗೆ ಧಾವಿಸುವ ತೀರ್ಮಾನ ಕೈಗೊಂಡಿದೆ.
ಪ್ರತಿಭಟನೆ ನಂತರ ಬಂಡೆ ಕುಟುಂಬ ಅನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಅವರ ಚಿಕಿತ್ಸೆಗೆ ಈಗಾಗಲೇ ಸುಮಾರು 20 ಲಕ್ಷ ರೂ.ಗಿಂತ ಅಧಿಕ ಹಣ ವೆಚ್ಚವಾಗಿದ್ದು, ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಮತ್ತಷ್ಟು ಹಣದ ಅವಶ್ಯಕತೆ ಇದೆ. ಸರ್ಕಾರ ಸಹಾಯ ಮಾಡಬೇಕು ಎಂದು ಮನವಿ ಮಾಡಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಂಡೆ ಅವರ ಪತ್ನಿಗೆ ಬರಬೇಕಿರುವ ವೇತನ ಸೇರಿದಂತೆ ಸರ್ಕಾರ ಘೋಷಿಸಿರುವ ಎಲ್ಲ ಸೌಲಭ್ಯಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಬಂಡೆ ಅವರ ಪತ್ನಿಗೆ ಸರ್ಕಾರದಿಂದ ಬರಬೇಕಿರುವ ಸೇವಾವಧಿ ವೇತನ ಸೇರಿದಂತೆ ಇತರೆ ಮೊತ್ತವನ್ನು ತಕ್ಷಣ ನೀಡಲಾಗುವುದು ಹಾಗೂ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಸರ್ಕಾರ ಭರಿಸಲಿದೆ. ಈ ಸಂಬಂಧ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು ಎಂದು ಸಿಎಂ ಹೇಳಿದರು.
ಎರಡೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಬಂಡೆ ಪತ್ನಿ
ಕಳೆದ ಎರಡೂವರೆ ತಿಂಗಳಿಂದ ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯಲ್ಲಿ ಮಲ್ಲಮ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿ ಬಗ್ಗೆ ಖಚಿತವಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಪರಿಹಾರ ವಿಳಂಬ; ಪ್ರತಿಭಟನೆ
ಮುಖ್ಯಮಂತ್ರಿ ಭೇಟಿಗೂ ಮುನ್ನ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಬಂಡೆ ಕುಟುಂಬವು ಸರ್ಕಾರ ಘೋಷಿಸಿದ್ದ ಪರಿಹಾರವನ್ನು ತಕ್ಷಣ ನೀಡಬೇಕು ಎಂದು ಒತ್ತಾಯಿಸಿ ವೀರಶೈವ ಯುವ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು. ಅನಂತರ ಪ್ರತಿಭಟನಾಕಾರರು ಆನಂದ್‌ರಾವ್ ವೃತ್ತದಿಂದ ಮುಖ್ಯಮಂತ್ರಿ ಭೇಟಿಗಾಗಿ ವಿಧಾನಸೌಧಕ್ಕೆ ತೆರಳಿ ಅಲ್ಲಿಯೂ ಪ್ರತಿಭಟನೆಗೆ ಮುಂದಾದ ಘಟನೆ ನಡೆಯಿತು.
ಆನಂದರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ನಂತರ ಬಂಡೆ ಕುಟುಂಬ ಹಾಗೂ ಅವರಿಗೆ ಬೆಂಬಲ ನೀಡಿದ್ದ ಸಂಘಟನೆಗಳ ಕಾರ್ಯಕರ್ತರು ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಸಲ್ಲಿಸಲು ವಿಧಾನಸೌಧಕ್ಕೆ ಆಗಮಿಸಿದ್ದರು. ಆದರೆ, ಮುಖ್ಯಮಂತ್ರಿ ಕಚೇರಿಯಲ್ಲಿ ಇರಲಿಲ್ಲ. ಹಾಗಾಗಿ, ಉಪ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿರುವ ಸೊಸೆಯ ವೈದ್ಯಕೀಯ ಚಿಕಿತ್ಸಾ ವೆಚ್ಚ ಭರಿಸಬೇಕು. ಈ ಹಿಂದೆ ಕೊಟ್ಟಿದ್ದ ಭರವಸೆ ಈಡೇರಿಸಬೇಕು ಎಂದು ಮನವಿ ಮಾಡಿದರು. ಉಪಕಾರ್ಯದರ್ಶಿಗಳು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಆದರೆ, ಈ ಭರವಸೆಯಿಂದ ತೃಪ್ತರಾಗದ ಸಂಘಟನೆ ಕಾರ್ಯಕರ್ತರು, “ಮುಖ್ಯಮಂತ್ರಿ ಬರುವವರೆಗೆ ಇಲ್ಲೇ ಧರಣಿ ಮಾಡೋಣ’ ಎಂದು ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಧರಣಿಗೆ ಮುಂದಾದರು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಇಲ್ಲಿ ಪ್ರತಿಭಟನೆಗೆ ಅವಕಾಶ ಇಲ್ಲ ಎಂದು ಕಳುಹಿಸಿದರು. ನಂತರ ಅಲ್ಲಿಂದ ಮುಖ್ಯಮಂತ್ರಿ ಅಧಿಕೃತ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ಪಿಎಸ್‌ಐ ಬಂಡೆ ತಂದೆ ಕರಿಬಸಪ್ಪ ಬಂಡೆ ಹಾಗೂ ಸಹೋದರರು, ವೇದಿಕೆ ಪದಾಧಿಕಾರಿಗಳಾದ ಪ್ರಶಾಂತ್ ಕಲ್ಲೂರು, ಕವನ ಬಸವ ಕುಮಾರ ಮತ್ತಿತರರು ಪಾಲ್ಗೊಂಡಿದ್ದರು.
-ಉದಯವಾಣಿ