
ಮಂಗಳೂರು, ಫೆ. 20: ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ಬಿರಿಸಿನಿಂದ ಆರಂಭಗೊಂಡಿದ್ದು, ಗ್ರಾಮಾಂತರ ಪ್ರದೇಶದ ಮತದಾರರು ತಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗೆ ಆಗಮಿಸುತ್ತಿರುವ ದೃಷ್ಯ ಕಂಡು ಬಂದಿದೆ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾರರು ಮತಗಟ್ಟೆಗೆ ಬಂದು ಸರತಿ ಸಾಲಿನಲ್ಲಿ ಮತದಾನ ಮಾಡಿದರು.
ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 136 ಮತಗಟ್ಟೆಗಳಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಗಳಿಗೆ ನಡೆದ ಚುನಾವಣೆಯ ಶನಿವಾರ ಬೆಳಗ್ಗಿನಿಂದ ಶಾಂತಿಯುತವಾಗಿ ನಡೆದಿದ್ದು, ಕೊಣಾಜೆಯ ಅಡ್ಕರೆ ಮತಗಟ್ಟೆ ಹೊರತುಪಡಿಸಿ ಉಳಿದ ಮತಗಟ್ಟೆಗಳಲ್ಲಿ ಸರಾಸರಿ 200 ರಿಂದ 220 ಮತದಾರರು ಮಧ್ಯಾಹ್ನದ ವೇಳೆಗೆ ತಮ್ಮ ಹಕ್ಕು ಚಲಾಯಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅವರು ಬೋಳಿಯಾರು ಜಾರದಗುಡ್ಡೆಯ ಮತಗಟ್ಟೆ ಸಂಖ್ಯೆ 280 ರಲ್ಲಿ ಮತ ಹಾಕಿದರು. ಕುಂಪಲ ಶಾಲಾ ಮತಗಟ್ಟೆಯಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮತ ಚಲಾಯಿಸಿದರು.
ಮಂಗಳೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ನೀರುಮಾರ್ಗದಲ್ಲಿ 11, ಕುರ್ನಾಡು 26, ಕೊಣಾಜೆ 34, ಪುದು 27, ಸೋಮೇಶ್ವರ 38, ಸೇರಿದಂತೆ ಒಟ್ಟು 136 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಶನಿವಾರ ದಿನವಾಗಿದ್ದರಿಂದಾಗಿ ಕೂಲಿ ಕಾರ್ಮಿಕ ಮತದಾರರ ಸಂಖ್ಯೆ ಕಡಿಮೆಯಾಗಿತ್ತು.
ಕೊಣಾಜೆಯ ಬೆಳ್ಮ ಅಡ್ಕರೆ ಪ್ರದೇಶದ ಮಂದಿ ರಸ್ತೆ ದುರಸ್ತಿ ಕಾಣದ ಹಿನ್ನೆಲೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳದೆ ಬಹಿಷ್ಕರಿಸುವ ಮೂಲಕ ಕೊಣಾಜೆಯ ಅಡ್ಕರೆ ಮತಗಟ್ಟೆಯಲ್ಲಿ ಮತದಾರರು ಕಡಿಮೆಯಾಗಿದ್ದರು. ಕುಂಪಲ ಶಾಲೆಯಲ್ಲಿ 88ರ ಹರೆಯದ ಕೊಲ್ಯ ಕನೀರುತೋಟದ ಸುಶೀಲಾ ಶೆಟ್ಟಿ ಮತ ಚಲಾಯಿಸಿದರೆ, ಮುನ್ನೂರು ಕುತ್ತಾರು ಮತಗಟ್ಟೆಯಲ್ಲಿ ಗಂಗಯ್ಯ 90ರ ಹರೆಯದವರು ಮಕ್ಕಳ ಆಶ್ರಯದಲ್ಲಿ ಹಕ್ಕನ್ನು ಚಲಾಯಿಸಿದರು.
ಜಿಲ್ಲೆಯಲ್ಲಿ 6,410 ಚುನಾವಣಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರತಿ ಬೂತ್ ಗೆ 1+4 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. 13 ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಹಾಗೂ 67 ತಾಲೂಕು ಪಂಚಾಯತ್ ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ನಡೆಯುತ್ತಿದೆ.
ಜಿಲ್ಲೆಯಲ್ಲಿ 422 ಸೂಕ್ಷ್ಮ ಮತಗಟ್ಟೆಗಳಿದ್ದು, 221 ಅತೀ ಸೂಕ್ಷ್ಮ ಮತಗಟ್ಟೆಗಳಿವೆ. 523 ಸಾಮಾನ್ಯ ಮತಗಟ್ಟೆಗಳಿವೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮತದಾರರು ನಿರ್ಭಯವಾಗಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ
ಕೈಕೊಟ್ಟ ಮತಯಂತ್ರ : ಒಂದೂವರೆ ಗಂಟೆ ವಿಳಂಭ
ಮತಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಕಟೀಲು ಸಮೀಪದ ನಡುಗೋಡು ಮತಗಟ್ಟೆಯಲ್ಲಿ ಮತದಾನ ವಿಳಂಬವಾದ ಘಟನೆ ನಡೆದಿದ್ದು, ಪರಿಣಾಮವಾಗಿ ಮತದಾರರು ಸುಮಾರು ಒಂದೂವರೆ ಗಂಟೆಗಳಷ್ಟು ಕಾಲ ಮತದಾನಕ್ಕಾಗಿ ಕಾಯುವಂತಾಯಿತು ಇದರಿಂದ ಆಕ್ರೋಶಿತರಾದ ಜನರು ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು. ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಮಂಗಳೂರು ತಹಶೀಲ್ದಾರ್ ಹೊಸ ಮತಯಂತ್ರ ಅಳವಡಿಕೆ ಮಾಡಿ ಮತದಾನ ಮುಂದುವರಿಯುವಂತೆ ಮಾಡಿದರು.
ಕಾರ್ಯಕರ್ತರ ನಡುವೆ ಮಾತಿನ ಚಕಮಕಿ:

ಪುದು ಗ್ರಾಮದ ಅಮೆಮಾರಿನಲ್ಲಿ ಎರಡು ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಾಮಕಿ ನಡೆಯಿತು. ಈ ಬಗ್ಗೆ ಮಾಹಿತಿ ಅರಿತ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸರವನ್ನು ಶಾಂತಗೊಳಿಸಿದರು.
ಮಾಣಿ ಜಿ.ಪಂ. ಅಭ್ಯರ್ಥಿ ಕೆ.ಟಿ. ಶೈಲಜಾ ಭಟ್ ಮತ್ತು ನೆಟ್ಲಮುಡ್ನೂರ್ ಗ್ರಾ.ಪಂ. ಅಭ್ಯರ್ಥಿ ಪುದು ಜಿಲ್ಲಾ ಪಂಚಾಯತ್ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ತುಂಬೆಯ ಬಿ.ಎ. ಜುನಿಯರ್ ಕಾಲೇಜಿನಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.
ಕೆದಿಲ ತಾ.ಪಂ. ಅಭ್ಯರ್ಥಿ ಪದ್ಮನಾಭ ಭಟ್, ಗೌಸ್ ಮುಹಿಯದ್ದೀನ್ ಚಾರ್ಮಾಡಿ, ಸಿನಾನ್ ಇಂದಬೆಟ್ಟು, ಬೆಳ್ತಂಗಡಿ, ತಸ್ಲಿಮ್ ಕಡಬ ಮತ್ತು ಅವರ ಮಾವ ಮುಹಮ್ಮದ್, ಶಿಹಾಬುದ್ದೀನ್ ಮರ್ದಳ, ಜಿನಿತ್ ಶೆಟ್ಟಿ ಮರ್ದಲ, ಕೆದಿಲ ತಾ.ಪಂ. ಅಭ್ಯರ್ಥಿ ಆದಮ್ ಕುಂಙಿ, ಸೌಕತ್ ಅಲಿ ಇಂದಬೆಟ್ಟು ಬೆಳ್ತಂಗಡಿ, ಹೈದರಾಲಿ ಹಿಂದುಸ್ತಾನ್, ನೌಶಾದ್ ಸೂರ್ಲಿ, ಮಾಣಿ ಜಿ.ಪಂ. ಅಭ್ಯರ್ಥಿ ಮಂಜುಳ ಮಾಧವ ಮವೆ, ನೆಟ್ಲಮುಡ್ನೂರ್ ಗ್ರಾ.ಪಂ. ಉಪಾಧ್ಯಕ್ಷತೆ ರೇವತಿ, ಸದಸ್ಯರುಗಳಾದ ಸಮಿತಾ ಡಿ. ಪೂಜಾರಿ ಮತ್ತು ಪ್ರೇಮ, ಪುತ್ತಿಗೆ ಜಿ.ಪಂ ಕ್ಷೇತ್ರದ ಅಭ್ಯರ್ಥಿ ದಿವಾಕರ ಶೆಟ್ಟಿ ತೋಡಾರು ಅವರು ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ನಡೆಸಿದರು.
ಹೆಚ್ಚಿನ ವಿವರ ಹಾಗೂ ಚಿತ್ರ ನಿರೀಕ್ಷಿಸಿ…