ಮನೋರಂಜನೆ

ವಾರಾಣಸಿಯ ಚೆಲುವೆ ಶಾನ್ವಿ ಶ್ರೀವಾಸ್ತವ್‌ ‘ಭಲೇ ಜೋಡಿ’ಯ ನಾಯಕಿ

Pinterest LinkedIn Tumblr

shanvi1-ಪದ್ಮನಾಭ ಭಟ್‌
‘ಮಾಸ್ಟರ್‌ ಪೀಸ್‌’ ಚಿತ್ರದಲ್ಲಿ ಗೆಲುವಿನ ನಗು ಬೀರಿದ್ದ ವಾರಾಣಸಿ ಮೂಲದ ಚೆಲುವೆ ಶಾನ್ವಿ ಶ್ರೀವಾಸ್ತವ್‌ ಇಂದು ತೆರೆಕಾಣಲಿರುವ ‘ಭಲೇ ಜೋಡಿ’ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸಿದ್ದಾರೆ. ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಕನ್ನಡದ ಜನ ತನ್ನನ್ನು ಸ್ವೀಕರಿಸಿರುವ ಬಗೆಗೆ ಖುಷಿಗೊಂಡಿರುವ ಅವರು ತಮ್ಮ ಬಣ್ಣದ ಬದುಕಿನ ಬಗೆಗೆ ಹುರುಪಿನಿಂದಲೇ ಮಾತನಾಡಿದ್ದಾರೆ.

ತಿಳಿಹಾಲಿಗೆ ಇಷ್ಟೇ ಇಷ್ಟು ಅರಿಶಿಣ ಬೆರೆಸಿದಂಥ ಮೈಬಣ್ಣ, ಚಂದ್ರನ ಬೆಳದಿಂಗಳಿಗೂ ಫಳಫಳ ಹೊಳೆಯುವ ದುಂಡು ಗೆನ್ನೆ, ಈಗಷ್ಟೇ ಕಿತ್ತುತಂದ ತಾಜಾ ಸಂಪಿಗೆಯನ್ನು ಜೋಡಿಸಿದಂಥ ಮೂಗು, ಏನನ್ನೋ ಹುಡುಕುವ, ಏನೇನೋ ಹೇಳುವ ಮಾತು ಮೀರಿದ ಭಾಷೆಯಲ್ಲಿ ಮಾತನಾಡುವ ಚಂಚಲ ಕಣ್ಣುಗಳು, ಎಷ್ಟು ತಿಳಿಹೇಳಿದರೂ ಹೇಳಿದಲ್ಲಿ ಕೂಡದೇ ಪುಂಡುತನ ಮಾಡುವ ದೂಳುಬಣ್ಣದ ಅರೆಗುಂಗುರು ಕೂದಲು. ತೆಳುಗುಲಾಬಿ ಬಣ್ಣದ ಅರೆಬಿರಿದ ತುಟಿಗಳು, ಮೆಲುವಾಗಿ ನಕ್ಕರಂತೂ ಮುಗಿದೇಹೋಯಿತು…

‘ಮಾಸ್ಟರ್‌ ಪೀಸ್‌’ ಶಾನ್ವಿ ಶ್ರೀವಾಸ್ತವ್‌ ಎಂಬೀ ನೀಳಕಾಯೆ ನಟಿಸಿದ ಸಿನಿಮಾದ ಹೆಸರಷ್ಟೇ ಅಲ್ಲ, ಅವರ ಚೆಲುವಿನ ಅನ್ವರ್ಥಕವೂ ಹೌದು.
ಈ ವಾರ ತೆರೆ ಕಾಣಲಿರುವ ‘ಭಲೇ ಜೋಡಿ’ ಚಿತ್ರದಲ್ಲಿಯೂ ನಟಿಸಿರುವ ಶಾನ್ವಿ, ಕನ್ನಡದಲ್ಲಿ ಇನ್ನಷ್ಟು ಒಳ್ಳೆಯ ಸಿನಿಮಾಗಳನ್ನು ಮಾಡುವ ಆಸೆ ಮತ್ತು ಭರವಸೆ ಎರಡನ್ನೂ ಇರಿಸಿಕೊಂಡವರು.

ವಾರಾಣಸಿ ಮೂಲದ ಈ ಬೆಡಗಿ ಹೆಸರು ಮಾಡಿದ್ದು ಮಾತ್ರ ದಕ್ಷಿಣ ಭಾರತ ಸಿನಿಮಾ ರಂಗದಲ್ಲಿಯೇ. 2012ರಲ್ಲಿ ‘ಲವ್ಲೀ’ ಎಂಬ ತೆಲುಗು ಸಿನಿಮಾದ ಮೂಲಕ ವಿದ್ಯಾರ್ಥಿ ಜೀವನದಲ್ಲಿಯೇ ಸಿನಿಮಾ ಜಗತ್ತಿಗೆ ಪ್ರವೇಶ ಮಾಡಿದ  ಶಾನ್ವಿ ಅವರಿಗೆ ನಟಿಯಾಗಬೇಕು ಎಂಬ ಕನಸೇನೂ ಇರಲಿಲ್ಲ.

‘ನಾನ್ಯಾವತ್ತೂ ನಟಿ ಆಗಬೇಕು ಎಂದು ಯೋಚಿಸಿರಲಿಲ್ಲ. ‘ಲವ್ಲೀ’ ಚಿತ್ರದ ನಿರ್ದೇಶಕ ಬಿ. ಜಯ ಅವರು ಹೊಸ ಮುಖವನ್ನು ಹುಡುಕುತ್ತಿದ್ದರು. ನನ್ನ ಕುಟುಂಬದ ಸ್ನೇಹಿತರೊಬ್ಬರಿಗೆ ಈ ವಿಷಯ ತಿಳಿದು ಮೊಬೈಲಲ್ಲಿ ತೆಗೆದ ನನ್ನ ಸಾಧಾರಣ ಫೋಟೊವನ್ನು ಅವರಿಗೆ ಕಳಿಸಿಕೊಟ್ಟಿದ್ದರು. ಅದನ್ನು ನೋಡಿ ಮೆಚ್ಚಿಕೊಂಡ ಅವರು ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟರು’ ಎಂದು ತಾವು ನಟನಾ ಜಗತ್ತಿನ ಭಾಗವಾದ ಬಗೆಯನ್ನು ನೆನಪಿಸಿಕೊಳ್ಳುವ ಅವರು, ‘ಇದೊಂದು ಆಕಸ್ಮಿಕ, ಆದರೆ ಸಿಹಿಯಾದ ಆಕಸ್ಮಿಕ’ ಎಂದು ನಗೆಮಲ್ಲಿಗೆ ಚೆಲ್ಲುತ್ತಾರೆ.

2013ರಲ್ಲಿ ‘ಅಡ್ಡಾ’ ಎಂಬ ಇನ್ನೊಂದು ತೆಲುಗು ಸಿನಿಮಾದಲ್ಲಿ ನಟಿಸಿದ ಶಾನ್ವಿ, 2014ರಲ್ಲಿ ತೆರೆಕಂಡ ‘ಚಂದ್ರಲೇಖಾ’ಳಾಗಿ ಚಂದನವನದಲ್ಲಿಯೂ ತಾವು ಪಡೆದರು. ಕನ್ನಡದ ತಮ್ಮ ಎರಡನೇ ಚಿತ್ರ ‘ಮಾಸ್ಟರ್‌ ಪೀಸ್‌’ನಲ್ಲಿ ಸದ್ಯದ ಗೆಲ್ಲುವ ಕುದುರೆ ಯಶ್‌ ಅವರ ಜತೆ ತೆರೆ ಹಂಚಿಕೊಳ್ಳುವ ಅದೃಷ್ಟ ಸಿಕ್ಕಿದ್ದು ಶಾನ್ವಿ ವಿಶ್ವಾಸವನ್ನು ಇಮ್ಮಡಿಸಿದೆ.

ಕೆಲವೇ ಕೆಲವು ಚಿತ್ರಗಳಲ್ಲಿ ನಟಿಸಿದ್ದರೂ ಕನ್ನಡದಂಗಳ ತಮ್ಮನ್ನು ಬರಮಾಡಿಕೊಂಡ ಬಗೆ ಅವರಲ್ಲಿ ಕೃತಜ್ಞಭಾವ ಮೂಡಿಸಿದೆ. ‘ಕನ್ನಡ ಪ್ರೇಕ್ಷಕರು ಕನ್ನಡಿಗಳಲ್ಲದ ನನ್ನನ್ನು ಸ್ವೀಕರಿಸಿದ ರೀತಿ ನನಗೊಂದು ದೊಡ್ಡ ಅಚ್ಚರಿ. ಇದೊಂದು ಸುಂದರ ಅನುಭವ’ ಎನ್ನುವ ಅವರು ಕನ್ನಡ ಚಿತ್ರರಂಗದವರನ್ನೂ ಮುಕ್ತವಾಗಿ ಪ್ರಶಂಸಿಸುತ್ತಾರೆ.

‘ಸುಮ್ಮನೆ ಕಾಲಹರಣಕ್ಕಾಗಿ ಸಿನಿಮಾ ಮಾಡುವವರ ಬಳಿ ಕೆಲಸ ಮಾಡಲು ನನಗೆ ಇಷ್ಟವಿಲ್ಲ. ಆದರೆ ಕನ್ನಡ ಚಿತ್ರರಂಗದವರು ತುಂಬ ಶ್ರಮಜೀವಿಗಳು. ಸಿನಿಮಾದ ಬಗ್ಗೆ ಅತೀವ ವ್ಯಾಮೋಹ ಉಳ್ಳವರು. ಅದಕ್ಕಾಗಿಯೇ ನಾನು ಈ ಭಾಷೆಯಲ್ಲಿ ಇಷ್ಟಪಟ್ಟು ಸಿನಿಮಾ ಮಾಡುತ್ತಿದ್ದೇನೆ’ ಎನ್ನುವ ಶಾನ್ವಿ, ‘ಮಾಸ್ಟರ್‌ ಪೀಸ್‌’ ಸಿನಿಮಾದಲ್ಲಿ ನಟಿಸಿದ್ದರಿಂದ ತುಂಬ ಕಲಿತುಕೊಂಡಿದ್ದಾರಂತೆ. ಈ ವಾರ ತೆರೆಕಾಣಲಿರುವ ತಮ್ಮ ನಟನೆಯ ‘ಭಲೆ ಜೋಡಿ’ ಸಿನಿಮಾದ ಬಗೆಗೂ ಅವರು ಉತ್ಸಾಹದಿಂದಲೇ ಮಾತನಾಡುತ್ತಾರೆ.

‘ಈ ಚಿತ್ರದ ಪಾತ್ರ ತುಂಬ ಭಿನ್ನವಾಗಿದೆ. ಹಲವು ಭಾವಗಳು ಮಿಶ್ರಗೊಂಡಿರುವ ಪಾತ್ರವಿದು. ನಾಯಕನಿಗೆ ಸ್ನೇಹಿತೆಯಾಗಿ, ಸಂಗಾತಿಯಾಗಿ ಹಲವು ರೀತಿಗಳಲ್ಲಿ ಜತೆಯಾಗುವ ಪಾತ್ರ ನನ್ನದು. ಈ ಸಿನಿಮಾದಲ್ಲಿನ ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ. ಎಲ್ಲಿಯೂ ಪ್ರೇಕ್ಷಕರಿಗೆ ಬೋರ್‌ ಆಗಲು ಸಾಧ್ಯವೇ ಇಲ್ಲ’ ಎನ್ನುವಾಗ ಅವರ ಮಾತಿನಲ್ಲಿ ಆತ್ಮವಿಶ್ವಾಸ ಎದ್ದು ತೋರುತ್ತದೆ.

ಕನ್ನಡಿಗರಲ್ಲದ ನೀವು ಕನ್ನಡ ಭಾಷೆಯ ಸಿನಿಮಾಗಳಿಗೆ ಹೇಗೆ ಸಿದ್ಧಗೊಳ್ಳುತ್ತೀರಿ ಎಂದು ಕೇಳಿದರೆ, ‘ನಂಗೆ ಸಲಪ ಸಲಪ ಕನ್ನಡ ಬರತೆ.. ಮಾತಾಡಲಿಕೆ ಸಲಪ ಪ್ರಾಬ್ಲಂ ಆಗತೆ…’ ಎಂದು ತಡವರಿಸುತ್ತಲೇ ಹೇಳಿ ‘ನಾನೇನಾದ್ರೂ ತಪ್ಪು ಮಾತಾಡಿದೆನಾ?’ ಎಂದು ಇಂಗ್ಲಿಷಿನಲ್ಲಿ ಕೊಂಚ ಆತಂಕದಿಂದಲೇ ಕೇಳುತ್ತಾರೆ ಅವರು. ಆಕರ್ಷಕ ಮೈಮಾಟದ ಈ ಚೆಂದುಳ್ಳಿಗೆ ದೇಹಾಕಾರದ ಬಗ್ಗೆ ವಿಶೇಷ ಕಾಳಜಿಯಿದೆ.

‘ಒಂದೊಮ್ಮೆ ನಾನು ದಿನವೂ ಜಿಮ್‌ನಲ್ಲಿ ಬೆವರು ಹರಿಸದಿದ್ದರೆ ಇನ್ನಷ್ಟು ತೆಳ್ಳಗಾಗಿಬಿಡುವ ಅಪಾಯ ಇದೆ. ಆಗ ಕನ್ನಡದ ಪ್ರೇಕ್ಷಕರು ನನ್ನನ್ನು ಒಪ್ಪಿಕೊಳ್ಳಲಾರರು’ ಎಂದು ಚಟಾಕಿ ಹಾರಿಸುವ ಶಾನ್ವಿ, ದಿನವೂ ಒಂದರಿಂದ ಒಂದೂವರೆ ಗಂಟೆಗಳ ಕಾಲ ಜಿಮ್‌ನಲ್ಲಿ ಕಳೆಯುತ್ತಾರೆ.

ದೇಹಾಕಾರದ ಬಗ್ಗೆ ಎಷ್ಟೇ ಎಚ್ಚರವಹಿಸಿದರೂ ಆಹಾರದ ವಿಷಯದಲ್ಲಿ ಮಾತ್ರ ಇವರು ರಾಜಿ ಮಾಡಿಕೊಳ್ಳಲಾರರು. ‘ನಾನು ತುಂಬಾ ಫುಡ್ಡೀ..’ ಎಂದು ಖುಷಿಯಿಂದಲೇ ಹೇಳಿಕೊಳ್ಳುವ ಅವರಿಗೆ ಅಡುಗೆ ಮಾಡುವುದು ಅಂದರೂ ಅಷ್ಟೇ ಇಷ್ಟ. ‘ನಟನಾ ರಂಗದಲ್ಲಿರುವುದರಿಂದ ಕಷ್ಟಪಟ್ಟು ಎಣ್ಣೆ ಪದಾರ್ಥಗಳ ಸೇವನೆಯನ್ನು ನಿಯಂತ್ರಿಸುತ್ತೇನೆ’ ಎನ್ನುವ  ಶಾನ್ವಿ ಅವರಿಗೆ ಚಿಕನ್‌ ಹೆಸರು ಹೇಳಿದರೂ ಸಾಕು ಬಾಯಲ್ಲಿ ನೀರೂರುತ್ತದೆ.

‘ನಟನೆ ನನ್ನ ಪ್ರೊಫೆಷನ್‌, ಪ್ಯಾಷನ್‌ ಎಲ್ಲವೂ’ ಎನ್ನುವ ಇವರು ಕ್ಯಾಮೆರಾದಿಂದ ಬಿಡುವು ಸಿಕ್ಕಾಗಲೆಲ್ಲ ಕುಂಚವನ್ನು ಕೈಗೆತ್ತಿಕೊಂಡು ಚಿತ್ರ ಬಿಡಿಸಲು ತೊಡಗುತ್ತಾರೆ. ಕೋಮಲತೆಯಿಂದಲೇ ಮನಸೆಳೆಯುವ ಇವರಿಗೆ ಕಿಕ್‌ ಬಾಕ್ಸಿಂಗ್‌ ಕ್ರೀಡೆಯೂ ಚೆನ್ನಾಗಿಯೇ ಗೊತ್ತು. ಭಿನ್ನ ಪಾತ್ರಕ್ಕಾಗಿ ಹಂಬಲಿಸುವ ಈ ನಟಿಗೆ ಕನಸಿನ ಪಾತ್ರ ಅಂತೇನೂ ಇಲ್ಲ.

‘ನಾನು ನಟಿಸುವ ಪ್ರತಿ ಪಾತ್ರವೂ ನನ್ನ ಕನಸಿನ ಪಾತ್ರವೇ. ಏಕತಾನತೆ ಹುಟ್ಟಿಸುವ ಪಾತ್ರಗಳಲ್ಲಿ ನಟಿಸಲು ನನಗೆ ಇಷ್ಟವಿಲ್ಲ. ಆದ್ದರಿಂದ ಇದು ನನ್ನ ಕನಸಿನ ಪಾತ್ರ ಎಂದು ಹೇಳಲು ಸಾಧ್ಯವಿಲ್ಲ. ಆದರೆ ‘ಬಾಜಿರಾವ್‌ ಮಸ್ತಾನಿ’ ಅಂತಹ ಸಿನಿಮಾದಲ್ಲಿ ನಟಿಸಬೇಕು. ಸಂಜಯ್‌ಲೀಲಾ ಬನ್ಸಾಲಿ ಅವರಂತಹ ನಿರ್ದೇಶಕರ ಜತೆ ಕೆಲಸ ಮಾಡಬೇಕು ಎನ್ನುವ ಕನಸು ನನಗಿದೆ’ ಎನ್ನುವ ಶಾನ್ವಿ ಅವರ ಕೈಯಲ್ಲೀಗ ಕನ್ನಡದ ಇನ್ನೆರಡು ಚಿತ್ರಗಳಿವೆ.

ರವಿಚಂದ್ರನ್‌ ಮಗ ಮನರಂಜನ್‌ ಜತೆ ‘ಸಾಹೇಬ’ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಿದ್ಧತೆಯಲ್ಲಿರುವ ಅವರಿಗೆ ರಾಕ್‌ಲೈನ್‌ ಪ್ರೊಡಕ್ಷನ್‌ನ ‘ಗಂಡು ಎಂದರೆ ಗಂಡು’ ಎಂಬ ರಿಮೇಕ್‌ ಚಿತ್ರದಲ್ಲಿ ಮಳೆ ಹುಡುಗ ಗಣೇಶ್‌ ಜತೆ ತೆರೆ ಹಂಚಿಕೊಳ್ಳುವ ಅವಕಾಶವೂ ಸಿಕ್ಕಿದೆ.

***
ನನ್ನ ಮಟ್ಟಿಗೆ ಅಭಿನಯ ಎಂದರೆ ನಾವಲ್ಲದ ಇನ್ನೊಂದು ಪಾತ್ರದೊಳಗೆ ಪ್ರವೇಶಿಸುವುದು. ಅದನ್ನು ಅನುಭವಿಸುವುದು ಮತ್ತು ಅಭಿನಯಿಸುವುದು. ನಮ್ಮದಲ್ಲದ ಆ ಪಾತ್ರವನ್ನು ಎಷ್ಟರಮಟ್ಟಿಗೆ ನಮ್ಮದಾಗಿಸಿಕೊಳ್ಳುತ್ತೇವೆ ಎನ್ನುವುದರಲ್ಲಿಯೇ ಅಭಿನಯದ ಯಶಸ್ಸಿದೆ. ಪ್ರತಿ ಪಾತ್ರವನ್ನು ಅಭಿನಯಿಸುವಾಗಲೂ ನಾನು ನನ್ನನ್ನು ಸಂಪೂರ್ಣವಾಗಿ ಮರೆಯುತ್ತೇನೆ. ಆ ಪಾತ್ರವೇ ನಾನಾಗುತ್ತೇನೆ.
-ಶಾನ್ವಿ ಶ್ರೀವಾಸ್ತವ್‌

Write A Comment