ಬೆಂಗಳೂರು: ಗಂಡನನ್ನು ಪೊಲೀಸರೇ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಮಹಿಳೆಯೊಬ್ಬಳು ಆರೋಪಿಸಿದಾರೆೆ. ಅಂತರ್ಧರ್ವಿುಯ ವಿವಾಹಕ್ಕೆ ಪಾಲಕರಿಂದ ವಿರೋಧ ವ್ಯಕ್ತವಾದ್ದರಿಂದ ಸಹಾಯ ಕೇಳಿ ನಗರ ಪೊಲೀಸ್ ಆಯುಕ್ತರು ಹಾಗೂ ಬಸವೇಶ್ವರನಗರ ಪೊಲೀಸರ ಬಳಿ ಹೋಗಿದ್ದೆ. ಆದರೆ, ಪೊಲೀಸರು ಪಾಲಕರ ತಾಳಕ್ಕೆ ಕುಣಿದು ಜೀವ ಬೆದರಿಕೆ ಒಡ್ಡಿದ್ದಾರೆ. ನನಗೆ ಹಾಗೂ ಗಂಡನಿಗೆ ಥಳಿಸಿ ಸುಳ್ಳು ಪ್ರಕರಣದಲ್ಲಿ ಜೈಲಿಗೆ ಕಳುಹಿಸುವುದಾಗಿ ಹೆದರಿಸಿದ್ದಾರೆ ಎಂದು ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಪೊಲೀಸರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ವಿದ್ಯಾಶ್ರೀ ಎಂಬುವರು ಅಮ್ಜದ್ ಖಾನ್ ಎಂಬಾತನನ್ನು ಪ್ರೀತಿಸಿ ದೇವಸ್ಥಾನವೊಂದರಲ್ಲಿ 2015ರ ಜು. 5ರಂದು ಮದುವೆಯಾಗಿದ್ದರು. ಈ ಮದುವೆಗೆ ಯುವತಿ ಪಾಲಕರ ಸಮ್ಮತಿ ಇರಲಿಲ್ಲ. ಆದಾಗ್ಯೂ ಜ. 25ರಂದು ಮದುವೆ ನೋಂದಣಿ ಮಾಡಿಕೊಂಡಿದ್ದರು.
ನಮ್ಮ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆ. ಫೆ. 4ರಂದು ಕೆಲಸಕ್ಕೆ ಹೋಗಿದ್ದ ಪತಿ ಅಮ್ಜದ್ ಮನೆಗೆ ವಾಪಸ್ ಆಗಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪ್ರಯೋಜನವಾಗಿಲ್ಲ. ಬದಲಾಗಿ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪೊಲೀಸರ ನೆರವು ಕೇಳಿದಾಗ ಪತಿ ಮೇಲೆ ಮಾದಕ ವಸ್ತು ಸಾಗಾಟದ ಆರೋಪ ಹೊರಿಸಿ ಜೈಲಿಗೆ ಹಾಕುವುದಾಗಿ ಬೆದರಿಸಿದ್ದರು. ನನ್ನ ಮೇಲೆ ಆಭರಣ ಕಳವಿನ ಆರೋಪ ಹೊರಿಸಲು ತಯಾರಿ ನಡೆಸಿದ್ದರು ಎಂದು ಪೊಲೀಸರ ವಿರುದ್ಧ ವಿದ್ಯಾಶ್ರೀ ಆರೋಪಿಸಿದ್ದಾರೆ.
ವಾರದೊಳಗೆ ಹುಡáಕಲು ಸೂಚನೆ
ಒಂದು ವಾರದೊಳಗೆ ಅರ್ಜಿದಾರಳ ಪತಿಯನ್ನು ಹುಡುಕಿ ಒಪ್ಪಿಸುವಂತೆ ಕೋರ್ಟ್ ಸೂಚಿಸಿದೆ. ಏತನ್ಮಧ್ಯೆ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಿರುವ ಪೊಲೀಸರು, ಅರ್ಜಿದಾರರು ಸಲ್ಲಿಸಿದ ದೂರಿನ ಪ್ರತಿಯಲ್ಲಿರುವ ವಿಳಾಸದಲ್ಲಿ ಆಕೆ ಇಲ್ಲದಿರುವ ಕಾರಣದಿಂದ ವಿಚಾರಣೆ ಮುಂದುವರಿಸಿರಲಿಲ್ಲ ಎಂದು ತಿಳಿಸಿದ್ದಾರೆ.