ಉದಯವಾಣಿ ದೆಹಲಿ ಪ್ರತಿನಿಧಿ: ವಿವಿಧತೆಯಲ್ಲಿ ಏಕತೆ ಭಾರತದ ಮೂಲಗುಣ. ದೇಶವು ಸೈದ್ಧಾಂತಿಕವಾಗಿ ಮತ್ತು ಧಾರ್ಮಿಕ ಕಾರಣಗಳಿಂದ ಒಡೆದು ಹೋಗುತ್ತಿದೆ ಎಂದು ಶ್ರೀ ಎಂ ಎಂದೇ ಖ್ಯಾತಿವೆತ್ತ ಸಮಾಜ ಸೇವಕ ಮುಮ್ತಾಜ್ ಅಲಿ ಅವರು ಹೇಳಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಾಂತಿ, ಸೌಹಾರ್ದತೆ ಮತ್ತು ಸಹಿಷ್ಣುತೆಗಾಗಿ ನಿರೀಕ್ಷೆಯ ನಡಿಗೆ (ದಿ ವಾಕ್ ಅಪ್ ಹೋಪ್) ಪಾದಯಾತ್ರೆ ನಡೆಸುತ್ತಿರುವ ಶ್ರೀ ಎಂ ಅವರು ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪತ್ರಕರ್ತರ ಜೊತೆಗಿನ ಸಂವಾದದಲ್ಲಿ ಮಾತನಾಡಿದರು. ಶ್ರೀ ಎಂ ಮತ್ತವರ ತಂಡ ಕನ್ಯಾಕುಮಾರಿಯಿಂದ 2015ರ ಜನವರಿ 12ರಂದು ಯಾತ್ರೆ ಪ್ರಾರಂಭಿಸಿದ್ದು, ಅದು ಈಗ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶ, ಉತ್ತರ ಪ್ರದೇಶವನ್ನು ಹಾದು ದೆಹಲಿಗೆ ಆಗಮಿಸಿದೆ. ನಾವು ಈಗಾಗಲೇ 5,900 ಕಿ.ಮೀ. ಕ್ರಮಿಸಿದ್ದೇವೆ. ಇನ್ನೂ 2,500
ಕಿ.ಮೀ. ಸಾಗಿ ಮೇ 1 ಅಥವಾ 2ಕ್ಕೆ ಶ್ರೀನಗರ ತಲುಪಲಿದ್ದೇವೆ ಎಂದು ಶ್ರೀ ಎಂ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳಿಗೆ ಸದಾ ಅವಕಾಶ ಇದ್ದೆ ಇರುತ್ತದೆ. ಯಾವುದೇ ಅಭಿಪ್ರಾಯವನ್ನು ಒಪ್ಪಬಹುದು, ವಿರೋಧಿಸಬ
ಹುದು. ಆದರೆ ಸ್ವಾತಂತ್ರ್ಯ ಇದೆ ಎಂದರೆ ಜವಾಬ್ದಾರಿ ಇಲ್ಲವೆಂದಲ್ಲ ಎಂದು ಹೇಳಿದರು.
ಯಾರೇ ದೇಶ ವಿರೋಧಿ ಘೋಷಣೆ ಕೂಗಿದರೆ ಅದು ತಪ್ಪು. ಅದನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಕಾನೂನು ನಿರ್ಮಿಸುವವರು ಕಾನೂನನ್ನು ಕೈಗೆತ್ತಿಕೊಳ್ಳಬಾರದು. ದೇಶ ದ್ರೋಹದ ಕಾನೂನು ಬ್ರಿಟಿಷರ ಕಾಲದ್ದಾಗಿದ್ದು, ಅದರ ಪರಿಶೀಲನೆ ನಡೆಯಬೇಕಿದೆ ಎಂದು ಜೆಎನ್‌ಯು ಘಟನೆಯ ಬಗ್ಗೆ ಪ್ರತಿಕ್ರಿಯಿಸಿದರು.
ಅಸಹಿಷ್ಣುತೆ ಕಾಣಿಸಿಲ್ಲ: ಈ ಪಾದಯಾತ್ರೆಯ ಸಂದರ್ಭದಲ್ಲಿ ನನಗೆ ಎಲ್ಲಿಯೂ ಅಸಹಿಷ್ಣುತೆಯ ಅನುಭವ ಆಗಿಲ್ಲ. ದೇಶದಲ್ಲಿನ ಯಾವುದೇ
ಸಮುದಾಯ ಕೂಡ ದೇಶದ ಮೂಲಸತ್ವಗಳನ್ನು ನಾಶಪಡಿಸಲು ಬಯಸುವುದಿಲ್ಲ. ಸ್ಥಾಪಿತ ಹಿತಾಸಕ್ತಿಗಳು ಮಾತ್ರ ಇಂತಹ ಕೆಲಸ ಮಾಡುತ್ತವೆ ಎಂದು ಶ್ರೀ ಎಂ ತಮ್ಮ ಅನುಭವ ಹಂಚಿಕೊಂಡರು.
ನಮ್ಮ ಯಾತ್ರೆಯ ಸಂದರ್ಭದಲ್ಲಿ ಎಲ್ಲ ಧರ್ಮಗಳ ಶ್ರದ್ಧಾ ಕೇಂದ್ರಗಳಿಗೆ ಭೇಟಿ ನೀಡಿದ್ದೇವೆ. ನಮ್ಮ ಕಾರ್ಯಕ್ರಮಗಳಲ್ಲಿ ಪಕ್ಷಾತೀತವಾಗಿ ನಾಯಕರು ಭಾಗವಹಿಸಿದ್ದಾರೆ. ಎಲ್ಲರೂ ನಮ್ಮನ್ನು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಈ ಯಾತ್ರೆಯಿಂದ ನಾಡಿನ ಎಲ್ಲ ಸಮಸ್ಯೆಯನ್ನು ಪರಿಹರಿಸಿದ್ದೇವೆ, ಪರಿಹರಿಸಲಿದ್ದೇವೆ ಎಂದು ಹೇಳುವುದಿಲ್ಲ. ಆದರೆ ಮಾನವೀಯತೆಯ ಬೀಜ ಬಿತ್ತುವ ಕೆಲಸ ಮಾಡಿದ್ದೇವೆ. ಬೀಜ ಒಡೆದು ಮರವಾಗಲು ಸಮಯ ಬೇಕು ಎಂದು ವಿವರಿಸಿದರು.
ಏಕತೆ ಸಾರುವುದು ನಮ್ಮ ಉದ್ದೇಶ: ದೇಶದ ಏಕತೆಯನ್ನು ಕಾಪಾಡುವುದು, ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾರುವುದು, ಸಂವಾದದಿಂದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ಜನರಿಗೆ ಮನದಟ್ಟು ಮಾಡಿಕೊಡುವುದು ನಮ್ಮ ಉದ್ದೇಶ ಎಂದು ಹೇಳಿದರು.
-ಉದಯವಾಣಿ