ಉಡುಪಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಧರಿಸಿರುವ 70 ಲ.ರೂ. ಮೌಲ್ಯದ ವಜ್ರ ಖಚಿತ ವಾಚ್ ಈಗ ವಿವಾದಕ್ಕೀಡಾಗಿದೆ. ಈ ವಿವಾದ ಬೆಳೆದು ಅವರು ರಾಜೀನಾಮೆ ನೀಡುವ ಸ್ಥಿತಿಯೂ ಬರಬಹುದು. ಆದ್ದರಿಂದ ಈಗಲೇ ಆ ವಾಚನ್ನು ಹರಾಜು ಹಾಕಿ, ಅದರಿಂದ ಬಂದ ಹಣವನ್ನು ಸಾಮಾಜಿಕ ಸೇವೆಗಳಿಗೆ ಬಳಸಬೇಕು. ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರ ಮಾದರಿ ಅನುಸರಿಸಬೇಕು ಎಂದು ಕಾಂಗ್ರೆಸ್ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ ಅವರು ಸಲಹೆ ನೀಡಿದರು.

ಬುಧವಾರ ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಪ್ಪನ್ನು ಈಗಲೇ ಸರಿ ಮಾಡಿಕೊಳ್ಳಬೇಕು. ನರೇಂದ್ರ ಮೋದಿ ಅವರು 10 ಲಕ್ಷ ರೂ. ಬೆಲೆಯ ಸೂಟು ಧರಿ್ಸಿದ್ದರು ಎಂಬ ಆರೋಪ ಬಂದಾಗ, ಅದನ್ನು ಹರಾಜಿಗೆ ಹಾಕಿ ಅದರಿಂದ ಸಂಗ್ರಹವಾದ 4 ಕೋ. ರೂ. ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿದ್ದಕ್ಕಾಗಿಯೇ ಜನರು ಎಲ್ಲವನ್ನೂ ಮರೆತು ಅವರನ್ನು ಕ್ಷಮಿಸಿದರು. ಇದನ್ನೇ ಸಿದ್ದರಾಮಯ್ಯ ಕೂಡ ಅನುಸರಿಸಿದರೆ ಜನರು ಕ್ಷಮೆ ನೀಡುತ್ತಾರೆ. ಇಲ್ಲ ವಾದರೆ ಮುಂದೆ ವಾಚ್ ವಿಚಾರದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡ ಬೇಕಾಗಬಹುದು.
ಗೌರವಾನ್ವಿತ ಸ್ಥಾನದಲ್ಲಿರುವ ವ್ಯಕ್ತಿಗಳು ರಾಜಧರ್ಮ ಪಾಲಿಸಬೇಕು. ನಾನು ಯಾವತ್ತೂ ಒಂದು ಹೂ, ಶಾಲನ್ನು ಕೂಡ ತೆಗೆದುಕೊಂಡಿಲ್ಲ. ಹಾಗಾಗಿ ಕಿವಿಮಾತು ಹೇಳುವ ಹಕ್ಕು ನನಗಿದೆ ಎಂದ ಪೂಜಾರಿ, ಕ್ಷಮೆ ಕೇಳಿದರೆ ಏನು ಕಳೆದುಕೊಳ್ಳುತ್ತೀರಿ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.
ತಾ.ಪಂ.ನಲ್ಲಿ ಜನತೆ ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸುತ್ತಿದ್ದಾರೆ. ನಾನು ಚುನಾವಣಾ ಪ್ರಚಾರಕ್ಕೆ ಹೋದ ಸಂದರ್ಭಗಳಲ್ಲೆಲ್ಲಾ ಉತ್ತಮ ಸ್ಪಂದನ ವ್ಯಕ್ತವಾಗಿದೆ. ಹಾಗಾಗಿ ಕಾಂಗ್ರೆಸ್ ಗೆಲುವು ಖಚಿತ. ಇಂತಹ ಸಂದರ್ಭ ಕಾಂಗ್ರೆಸ್ ನಲ್ಲಿ ಬಂಡಾಯವಾಗಿ ಸ್ಪರ್ಧಿಸುವುದು ಸರಿಯಲ್ಲ. ಬಂಡಾಯ ನಿಂತು ಕಾಂಗ್ರೆಸ್ ಸೋತಿತು ಎಂಬ ಕಳಂಕದಿಂದ ದೂರಾಗಲು, ಇಂತಹ ಬಂಡಾಯ ಅಭ್ಯರ್ಥಿಗಳ ಮುಂದಿನ ರಾಜಕೀಯ ಬದುಕು ಕೂಡ ಉತ್ತಮವಾಗಲು ಬಂಡಾಯದಿಂದ ಹಿಂದೆ ಸರಿಯಬೇಕು ಎಂದು ಅವರು ಮನವಿ ಮಾಡಿದರು.