ನವದೆಹಲಿ (ಪಿಟಿಐ): ಕೊಲಂಬಿಯಾ, ಯೇಲ್, ಹಾರ್ವರ್ಡ್ ಮತ್ತು ಕೇಂಬ್ರಿಜ್ ಸೇರಿದಂತೆ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ 400ಕ್ಕೂ ಹೆಚ್ಚು ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿರುವ ಜೆಎನ್ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದ್ದಾರೆ.
‘ವಿಮರ್ಶಾತ್ಮಕ ಚಿಂತನೆ, ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯ, ವಿದ್ಯಾರ್ಥಿಗಳ ಕ್ರಿಯಾಶೀಲತೆ ಮತ್ತು ರಾಜಕೀಯ ನಂಬಿಕೆಗಳಲ್ಲಿ ಬಹುತ್ವವನ್ನು ಒಳಗೊಂಡು ವಿಶ್ವವಿದ್ಯಾಲಯಗಳಲ್ಲಿ ಮುಕ್ತ ಚಿಂತನೆಗೆ ಅವಕಾಶ ಇರಬೇಕು ಎಂಬ ನಿಲುವನ್ನು ಜೆಎನ್ಯು ಹೊಂದಿದೆ.
ಇಂತಹ ವಿಮರ್ಶಾತ್ಮಕ ಚಿಂತನೆಯನ್ನೇ ನಾಶಪಡಿಸಲು ಈಗಿನ ಸರ್ಕಾರ ಬಯಸುತ್ತಿದೆ. ಇದು ಭಾರತಕ್ಕಷ್ಟೇ ಸೀಮಿತವಾದ ಅಂಶ ಅಲ್ಲ ಎಂಬುದು ನಮಗೆ ತಿಳಿದಿದೆ’ ಎಂದು ಅಂತರರಾಷ್ಟ್ರೀಯ ಮಟ್ಟದ ವಿವಿಗಳ 455 ಉಪನ್ಯಾಸಕರು ಸಹಿ ಮಾಡಿದ ಜಂಟಿ ಹೇಳಿಕೆಯಲ್ಲಿ ಅಭಿಪ್ರಾಯಪಡಲಾಗಿದೆ.
‘ಜಗತ್ತಿನ ವಿವಿಧೆಡೆಗಳಲ್ಲಿ ಇರುವ ಶಿಕ್ಷಕರು, ವಿದ್ಯಾರ್ಥಿಗಳಾಗಿ ಜೆಎನ್ಯುವಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅತ್ಯಂತ ಕಳವಳದಿಂದ ನೋಡುತ್ತಿದ್ದೇವೆ. ವಿದ್ಯಾರ್ಥಿಗಳ ಕಾನೂನು ಬಾಹಿರ ಬಂಧನ ಮತ್ತು ನಿರಂಕುಶವಾಗಿ ವಿದ್ಯಾರ್ಥಿಗಳ ಮೇಲೆ ನಿಷೇಧ ಹೇರಿಕೆಯನ್ನು ನಮ್ಮ ಸಹೋದ್ಯೋಗಿಗಳು (ಜೆಎನ್ಯು ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಉಪನ್ಯಾಸಕರು) ವಿರೋಧಿಸುತ್ತಿದ್ದಾರೆ. ಅದನ್ನು ಸುಮ್ಮನೆ ನೋಡುತ್ತಿರುವುದಕ್ಕೆ ನಮಗೆ ಸಾಧ್ಯವಿಲ್ಲ’ ಎಂದು ತಿಳಿಸಲಾಗಿದೆ. ಈ ಹೇಳಿಕೆಗೆ ಸಹಿ ಹಾಕಿದವರಲ್ಲಿ ಜೆಎನ್ಯುವಿನ ಹಲವು ಹಳೆ ವಿದ್ಯಾರ್ಥಿಗಳು ಸೇರಿದ್ದಾರೆ.
ವೆಬ್ಸೈಟ್ಗೆ ಕನ್ನ: ಜೆಎನ್ಯು ಕೇಂದ್ರೀಯ ಗ್ರಂಥಾಲಯದ ವೆಬ್ಸೈಟ್ಗೆ ಕನ್ನ ಹಾಕಲಾಗಿದೆ. ‘ಜೆಎನ್ಯು ಆವರಣದಲ್ಲಿ ಬೊಗಳಿದ ತಕ್ಷಣ ಕಾಶ್ಮೀರವನ್ನು ಪಡೆದುಬಿಡುತ್ತೀರಿ ಎಂದು ನೀವು ಭಾವಿಸಿದ್ದೀರಿ’ ಎಂಬ ಸಂದೇಶವನ್ನು ಕನ್ನಕೋರರು ರವಾನಿಸಿದ್ದಾರೆ.
ಗಿಲಾನಿ ಬಂಧನ
ಫೆ. 10ರಂದು ದೆಹಲಿ ಪ್ರೆಸ್ ಕ್ಲಬ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದೇಶವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ದೆಹಲಿ ವಿ.ವಿಯ ಮಾಜಿ ಉಪನ್ಯಾಸಕ ಎಸ್.ಎ.ಆರ್. ಗಿಲಾನಿ ಅವರನ್ನು ಬಂಧಿಸಲಾಗಿದೆ.
ಮತ್ತೆ ಘೋಷಣೆ
ಕೋಲ್ಕತ್ತ (ಪಿಟಿಐ): ಜೆಎನ್ಯು ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಇಲ್ಲಿನ ಜಾಧವಪುರ ವಿ.ವಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ರ್ಯಾಲಿಯಲ್ಲಿ ಕೆಲವರು ಅಫ್ಜಲ್ ಗುರು ಪರ ಘೋಷಣೆ ಕೂಗಿದ್ದಾರೆ.
‘ಕನ್ಹಯ್ಯಾ ತಪ್ಪೆಸಗಿಲ್ಲ’
ಕನ್ಹಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿರುವ ಸಾಧ್ಯತೆ ಇಲ್ಲ. ಕೆಲವು ಪೊಲೀಸ್ ಅಧಿಕಾರಿಗಳು ಅತ್ಯುತ್ಸಾಹದಿಂದ ಕನ್ಹಯ್ಯಾ ವಿರುದ್ಧ ದೇಶದ್ರೋಹದ ಆರೋಪ ಹೊರಿಸಿದ್ದಾರೆ ಎಂದು ಭದ್ರತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ.