
ಮಂಗಳೂರು, ಫೆ.13: ಸೌತ್ ಕೆನರಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ‘64ನೆ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ- 2016’ರ ಉದ್ಘಾಟನಾ ಸಮಾರಂಭ ಶುಕ್ರವಾರ ನಡೆಯಿತು.

ಕ್ರೀಡಾ ಸಚಿವ ಅಭಯಚಂದ್ರ ಜೈನ್ ‘64ನೆ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ- 2016’ನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಗರದಲ್ಲಿ ಸುಮಾರು 80 ಲಕ್ಷ ರೂ. ನಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ಟರ್ಫ್ ಫುಟ್ಬಾಲ್ ಕ್ರೀಡಾಂಗಣದ ಅಭಿವೃದ್ಧಿ ಸಹಿತ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಕೊಟ್ಟಾರದಲ್ಲಿ ಕಾಯ್ದಿರಿಸಲಾಗಿರುವ 9 ಎಕರೆ ಜಮೀನನ್ನು ಕ್ರಿಕೆಟ್ ಟರ್ಫ್ ಪಿಚ್ ಕ್ರೀಡಾಂಗಣವಾಗಿ ಪರಿವರ್ತಿಸುವುದಾಗಿ ಅವರು ಹೇಳಿದರು. ನಗರದಲ್ಲಿ ಸುಮಾರು 5 ಕೋ.ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳ ನಿರ್ಮಾಣ ಮಾಡುವುದಾಗಿ ಕೂಡ ಇದೇ ಸಂದರ್ಭದಲ್ಲಿ ಸಚಿವ ಅಭಯಚಂದ್ರ ಜೈನ್ ಘೋಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೇಯರ್ ಜೆಸಿಂತಾ ವಿಜಯ ಆಲ್ಫ್ರೆಡ್ ವಹಿಸಿದ್ದರು. ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಮುಡಾ ಅಧ್ಯಕ್ಷ ಕೋಡಿಜಾಲ್ ಇಬ್ರಾಹೀಂ, ಮಾಜಿ ಮೇಯರ್ ಕೆ.ಅಶ್ರಫ್, ಶ್ರೀದೇವಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಸದಾನಂದ ಶೆಟ್ಟಿ, ಮಾಂಡ್ ಸೊಭಾಣ್ನ ಅಧ್ಯಕ್ಷ ಲೂಯಿಸ್ ಜೆ.ಪಿಂಟೊ, ದ.ಕ. ಜಿಲ್ಲಾ ಬಸ್ ಆಪರೇಟರ್ಸ್ ಅಸೋಸಿಯೇಶನ್ನ ಅಧ್ಯಕ್ಷ ನೆಲ್ಸನ್ ಪಿರೇರ, ಖಾಸಗಿ ಬಸ್ ಆಪರೇಟರ್ಸ್ ಅಸೋಸಿಯೇಶನ್ನ ಎ.ಕೆ.ಜಯರಾಂ ಶೇಖ ಮೊದಲಾದವರು ಉಪಸ್ಥಿತರಿದ್ದರು.

ಸೌತ್ ಕೆನರಾ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸಿಯೇಶನ್ನ ಅಧ್ಯಕ್ಷ ಹಾಗೂ ವಿಧಾನ ಪರಿಷತ್ನ ಸದಸ್ಯ ಐವನ್ ಡಿಸೋಜ ಸ್ವಾಗತಿಸಿದರು.