ಕರ್ನಾಟಕ

ಮಗಳನ್ನು ಸೇನೆಗೆ ಸೇರಿಸೋದೇ ನನ್ನ ಗುರಿ: ಹುತಾತ್ಮ ಕೊಪ್ಪದ್ ಪತ್ನಿ

Pinterest LinkedIn Tumblr

Jayawaಧಾರವಾಡ: ನಮ್ಮ ಮಗಳನ್ನು ಓದಿಸಿ ಸೇನೆಗೆ ಸೇರಿಸುವುದೇ ನನ್ನ ಗುರಿ. ಅವರು ಸೇನೆಯಲ್ಲಿರೋದು ಗೊತ್ತಿದ್ದೆ ವಿವಾಹವಾಗಿದ್ದೆ. ಆದರೆ ಅವರಿಲ್ಲದೆ ಬದುಕುವ ಪಾಠ ಕಲಿಸಿಕೊಟ್ಟಿದ್ದಾರೆ…ಇದು ಕುಂದಗೋಳದ ಬೆಟದೂರಿನ ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಜಯಮ್ಮ ಅವರ ಮನದಾಳದ ಮಾತುಗಳು.

ವೀರ ಯೋಧ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ (34) ಅವರ ಅಂತ್ಯಕ್ರಿಯೆ ಬೆಟಗೇರಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತ್ತು. ಬಳಿಕ ಖಾಸಗಿ ಟಿವಿ ಚಾನೆಲ್ ವೊಂದರ ಜೊತೆ ಮಾತನಾಡಿದ ಜಯಮ್ಮ, ನಾನು ನನ್ನ ಪತಿ ಜೊತೆ ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದ್ದೇನೆ.ಊರಿಗೆ ಬರೋವಾಗ ಅಲ್ಲಿನ ಪರಿಸ್ಥಿತಿಯ ಕುರಿತ ಸಿಡಿ ತಂದು ತೋರಿಸುತ್ತಿದ್ದರು. ಹಾಗಾಗಿ ಸಿಯಾಚಿನ್ ನಲ್ಲಿ ನಡೆದ ದುರಂತ ಕೇಳಿ ನಾನು ಬೆಚ್ಚಿಬಿದ್ದಿಲ್ಲ. ಯಾಕೆಂದರೆ ದೇಶ ಸೇವೆ ಕರ್ತವ್ಯ ನಿರ್ವಹಿಸುತ್ತಿದ್ದ ನನ್ನ ಗಂಡನಿಗೆ ಒಂದಲ್ಲ ಒಂದು ದಿನ ಇಂತಹ ಪರಿಸ್ಥಿತಿ ಬರಬಹುದೆಂದು ಗೊತ್ತಿತ್ತು ನನಗೆ. ಈಗ ನಾನು ಧೈರ್ಯಗೆಡಲಾರೆ. ನನ್ನ ಮಗಳನ್ನು ಓದಿಸಿ ಸೇನೆಗೆ ಸೇರಿಸುತ್ತೇನೆ ಎಂದು ಹಂಬಲ ವ್ಯಕ್ತಪಡಿಸಿದ್ದಾರೆ.

ಮಗಳು ಕೂಡಾ ಸೇನೆಯಲ್ಲಿರುವವರನ್ನೇ ವಿವಾಹವಾಗಬೇಕೆಂದು ಕೊಪ್ಪದ್ ಒಮ್ಮೆ ಆಸೆ ವ್ಯಕ್ತಪಡಿಸಿದ್ದರು. ಫೆ.2ರಂದು ಮಗಳಿಗೆ ಹುಶಾರಿಲ್ಲವಾಗಿತ್ತು ಆಸ್ಪತ್ರೆಗೆ ಕರೆದೊಯ್ದಿದ್ದೆ. ಆ ದಿನ ಕರೆ ಮಾಡಿದ್ದ ಕೊಪ್ಪದ್ ಮಗಳ ಆರೋಗ್ಯ ವಿಚಾರಿಸಿದ್ದರು. ನಂತರ ಮನೆಗೆ ಬಂದ ಮೇಲೂ ಮೊಬೈಲ್ ಕರೆ ಮಾತನಾಡಿದ್ದೆ. ಅದೇ ಕೊನೆ, ಫೆ.3ರಂದು ಹಿಮಪಾತದ ದುರಂತ ಸಂಭವಿಸಿತ್ತು ಎಂದರು.

ದೇಶಸೇವೆಗಾಗಿ ತನ್ನ ಪ್ರಾಣವನ್ನೇ ಅರ್ಪಿಸಿದ್ದಾನೆ: ತಾಯಿ ಬಸವ್ವ
ನನ್ನ ಮಗ ಸೇನೆಗೆ ಸೇರುತ್ತೇನೆ ಎಂದಾಗ ಬೇಡ ಎಂದಿದ್ದೆ. ಆದರೆ ನನ್ನ ಮಗ ದೇಶಸೇವೆಗಾಗಿ ತನ್ನ ಪ್ರಾಣವನ್ನೇ ಮುಡಿಪಾಗಿಟ್ಟಿದ್ದಾನೆ. ಸಿಯಾಚಿನ್ ನಲ್ಲಿನ ಹಿಮಪಾತದ ವಿಷಯ ಹೇಳಿದಾಗ , ವಾಪಸ್ ಬಂದು ಬಿಡು ಎಂದು ಹೇಳಿದ್ದೆ. ಆದರೆ ಸಾಯೋರು ಎಲ್ಲಿದ್ದರೂ ಸಾಯ್ತಾರ ಅವ್ವ ಅಂತ ನನ್ನ ಮಗ ಹೇಳಿದ್ದ. ಸೇನೆಗೆ ಸೇರುವಂತ ಮಕ್ಕಳನ್ನು ಯಾರೂ ಅಡ್ಡಿಪಡಿಸಬೇಡಿ ಎಂದು ದೇಶದ ತಾಯಂದಿರಿಗೆ ಹೇಳಲು ಬಯಸುತ್ತೇನೆ…ಇದು ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ್ ತಾಯಿ ಬಸವ್ವ ಅವರ ಹೆಮ್ಮೆಯ ನುಡಿಗಳು.
-ಉದಯವಾಣಿ

Write A Comment