ಮೈಸೂರು, ಫೆ.11-ಮೈಸೂರು ರಾಜಮನೆತನಕ್ಕೆ ಸೇರಿದ ಆಸ್ತಿಯನ್ನು ಪರಭಾರೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ನಜರ್‌ಬಾದ್ ಪೊಲೀಸರು ಬಂಧಿಸಿದ್ದಾರೆ. ನಜರ್‌ಬಾದ್ ವಾಸಿ ಡೇವಿಡ್ ಬಂಧಿತ ಆರೋಪಿ. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಗುಣಾಂಬ ಟ್ರಸ್ಟ್ ಆಶ್ರಯದಲ್ಲಿ ಮಹಾರಾಜರ ಕಾಲದಲ್ಲಿ ಶಾಲೆಯೊಂದನ್ನು ನಡೆಸಲಾಗುತ್ತಿತ್ತು.
ಆ ಶಾಲೆ ಮುಚ್ಚಿ ಹೋದ ನಂತರ ಶಾಲೆಯಲ್ಲಿದ್ದ ಬಡವರಿಗೆ ಕಟ್ಟಡವನ್ನು ವಾಸವಿರಲು ನೀಡಲಾಗಿತ್ತು. ನಂತರದ ದಿನಗಳಲ್ಲಿ ಅಲ್ಲಿ ಯಾರೂ ವಾಸ ಇರಲಿಲ್ಲ. ಡೇವಿಡ್ ಪ್ಲಾನ್ ಮಾಡಿ ನಕಲಿ ದಾಖಲೆ ಸೃಷ್ಟಿಸಿ ಟ್ರಸ್ಟ್ ತನ್ನದೆಂಬಂತೆ ರಿಜಿಸ್ಟರ್ ಮಾಡಿಸಿ ಬೇರೆಯವರಿಗೆ ಕೋಟ್ಯಂತರ ರೂ.ಗೆ ಮಾರಾಟ ಮಾಡಿದ್ದ.
ರಾಣಿ ಪ್ರಮೋದಾದೇವಿ ಒಡೆಯರ್ ರಾಜಮನೆತನದ ಆಸ್ತಿ ಬಗ್ಗೆ ಇತ್ತೀಚೆಗೆ ವಿವರ ಪಡೆದಾಗ ಗುಣಾಂಬ ಟ್ರಸ್ಟ್ ಹೆಸರಿನ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿರುವುದು ಗೊತ್ತಾಗಿದೆ. ತಕ್ಷಣ ಡೇವಿಡ್‌ನ ಕರೆಸಿ ವಿಚಾರಿಸಿದಾಗ ಆತ ಸಮರ್ಪಕ ಮಾಹಿತಿ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ನಜರ್‌ಬಾದ್ ಠಾಣೆಗೆ ಅವರು ದೂರು ನೀಡಿದ್ದರು. ಹಾಗಾಗಿ ಡೇವಿಡ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ ನ್ಯಾಯಾಂಗಬಂಧನಕ್ಕೆ ಒಪ್ಪಿಸಲಾಗಿದೆ.