ಕರ್ನಾಟಕ

ರೆಹಮಾನ್ ಪರ ಕೈ ಮುಖಂಡರ ಅಬ್ಬರದ ಪ್ರಚಾರ

Pinterest LinkedIn Tumblr

7A3ಬೆಂಗಳೂರು, ಫೆ. ೭-ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೆಹಮಾನ್ ಶರೀಫ್‌ರವರು ಇಂದು ಬೆಳಿಗ್ಗೆಯೇ ಕ್ಷೇತ್ರದ ಹಲವು ಚರ್ಚ್‌ಗಳಿಗೆ ಭೇಟಿ ನೀಡಿ ಅಲ್ಲಿಗೆ ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಮತದಾರರೊಂದಿಗೆ ಸಂವಾದ ನಡೆಸಿ ಮತ ಯಾಚಿಸಿರುವುದು ವಿಶೇಷವಾಗಿತ್ತು.

ವಿ. ನಾಗೇನಹಳ್ಳಿ, ಗಂಗಾನಗರ, ರಿಂಗ್ ರಸ್ತೆಯ ಚರ್ಚ್‌ಗಳಿಗೆ ರೆಹಮಾನ್ ಶರೀಫ್‌ರವರು ಆಗಮಿಸುತ್ತಿದ್ದಂತೆ ನೂರಾರು ಮತದಾರರು ಅವರ ಸುತ್ತ ನೆರೆದು ಸ್ವಾಗತಿಸಿದರು.

ಹೆಚ್ಚು ಅನುದಾನ ತರುತ್ತೇನೆ
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದು, ತಮ್ಮನ್ನು ಉಳಿದ ಅವಧಿಗೆ ಶಾಸಕನಾಗಿ ಆಯ್ಕೆ ಮಾಡಿದ್ದಲ್ಲಿ ಕ್ಷೇತ್ರಕ್ಕೆ ಹೆಚ್ಚೆಚ್ಚು ಅನುದಾನವನ್ನು ಬಿಡುಗಡೆ ಮಾಡಿಸಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ಮತದಾರರಿಗೆ ರೆಹಮಾನ್ ಶರೀಫ್ ಭರವಸೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಗರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಹೆಚ್ಚೆಚ್ಚು ಅನುದಾನವನ್ನು ಬಿಡುಗಡೆ ಮಾಡಿದ್ದಾರೆ, ಕ್ಷೇತ್ರದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ತಾವು ಹೆಚ್ಚು ಒತ್ತು ನೀಡುವುದಾಗಿ ಅವರು ಆಶ್ವಾಸನೆ ನೀಡಿದರು.

ಹರಿ ಪ್ರಸಾದ್ ಪ್ರಚಾರ
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ. ಹರಿಪ್ರಸಾದ್, ಶಾಸಕ ಮುನಿರತ್ನ, ಬೆಂಗಳೂರು ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ. ಶೇಖರ್, ಮಾಜಿ ಸಚಿವ ಆರ್. ಕೃಷ್ಣಪ್ಪ ಅವರಂತಹ ಘಟಾನುಘಟಿ ನಾಯಕರು ಇಂದು ರೆಹಮಾನ್ ಶರೀಫ್‌ರವರ ಪರ ವ್ಯಾಪಕ ಪ್ರಚಾರ ನಡೆಸಿದರು.

ಬಿಜೆಪಿ ನಾಯಕರ ವಿರುದ್ಧ ದಾಳಿ ನಡೆಸಿದ ಹರಿಪ್ರಸಾದ್‌ರವರು ನಗರದ ಸಮಗ್ರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ. ಉಳಿದ ಯಾವುದೇ ಪಕ್ಷಗಳಿಂದ ಅಭಿವೃದ್ಧಿ ಆಗದು. ಇದು ಕನಸಿನ ಮಾತಾಗಿಯೇ ಉಳಿಯುತ್ತದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ರವರು ಈಗಾಗಲೇ ಕ್ಷೇತ್ರದಲ್ಲಿ ಮತಪ್ರಚಾರ ನಡೆಸಿದ್ದಾರೆ. ಹಾಗಾಗಿ ಇಲ್ಲಿ ಕಾಂಗ್ರೆಸ್ ಪರ ವಾದ ಅಲೆ ಎದ್ದು ಕಂಡಿವೆ. ರೆಹಮಾನ್ ಶರೀಫ್‌ರವರು ಈಗಾಗಲೇ ಎರಡು ಸುತ್ತಿನ ಮತ ಪ್ರಚಾರ ಕಾರ್ಯವನ್ನು ಪೂರ್ಣಗೊಳಿಸಿದ್ದು ಮೂರನೇ ಸುತ್ತಿನ ಪ್ರಚಾರಕ್ಕೆ ಅಣಿಯಾಗಿದ್ದಾರೆ.

ಪ್ರತಿ ಮತದಾರರನ್ನು ಭೇಟಿ ಮಾಡಿದ ತೃಪ್ತಿ ಇದೆ. ಇನ್ನೊಂದು ಸುತ್ತು ಪ್ರಚಾರ ನಡೆಸಿ ಮತ್ತೊಮ್ಮೆ ಮನವಿ ಮಾಡಲಿದ್ದೇನೆ. ಒಂದು ಬಾರಿ ತಮಗೆ ಅವಕಾಶ ನೀಡಬೇಕು, ಕ್ಷೇತ್ರವನ್ನು ಮಾದರಿ ವಾರ್ಡಾಗಿ ಮಾಡುವ ನನ್ನ ಕನಸನ್ನು ಸಾಕಾರಗೊಳಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದ್ದೇನೆ ಎಂದು ರೆಹಮಾನ್ ಶರೀಫ್ ತಿಳಿಸಿದ್ದಾರೆ.

ಪಕ್ಷದ ಅಭ್ಯರ್ಥಿ ರೆಹಮಾನ್ ಶರೀಫ್‌ರವರನ್ನು ಗೆಲ್ಲಿಸಲು ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿ ಖುದ್ದು ಸಚಿವರೇ ಉಸ್ತುವಾರಿ ವಹಿಸಿದ್ದಾರೆ. ಪ್ರಚಾರ ಕಾರ್ಯತಂತ್ರವನ್ನು ರೂಪಿಸಿದ್ದಾರೆ. ಹಾಲಿ ಹಾಗೂ ಮಾಜಿ ಪಾಲಿಕೆ ಸದಸ್ಯರು ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಟೊಂಕಕಟ್ಟಿ ಬಿರುಸಿನ ಮತಪ್ರಚಾರ ನಡೆಸಿದ್ದಾರೆ.

ಸಾರಿಗೆ ಸಚಿವಿ ರಾಮಲಿಂಗಾರೆಡ್ಡಿ, ಮೇಯರ್ ಮಂಜುನಾಥರೆಡ್ಡಿ, ಚಿತ್ರನಟಿ ರಮ್ಯಾ, ಭಾವನಾ ಅಲ್ಲದೆ ಹಲವರು ಸಚಿವರು, ಶಾಸಕರು ಈಗಾಗಲೇ ರೆಹಮಾನ್ ಶರೀಫ್ ಪರ ಪ್ರಚಾರಕ್ಕೆ ಸಾಥ್ ನೀಡಿದ್ದು, ಅವರ ಗೆಲುವಿಗೆ ಹೆಗಲಿಗೆ ಹೆಗಲು ಕೊಟ್ಟು ಪ್ರಾಮಾಣಿಕ ಪ್ರಯತ್ನ ನಡೆಸಿರುವುದು ರೆಹಮಾನ್ ಶರೀಫ್ ಗೆಲುವಿಗೆ ಸಾಕಾರವಾಗಲಿದೆ.

Write A Comment